ಮಂಗಳೂರು: ಮಕ್ಕಳಿಲ್ಲದ ಕೊರಗು , ಅನಾರೋಗ್ಯ ಹಾಗೂ ಕೋವಿಡ್-19 ಸೋಂಕಿಗೆ ಭಯಪಟ್ಟು ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸುರತ್ಕಲ್ ನ ಕುಳಾಯಿ ಚಿತ್ರಾಪುರಯಲ್ಲಿ ನಡೆದಿದೆ. ಮೃತರನ್ನು ರಮೇಶ್ ಸುವರ್ಣ ಮತ್ತು ಗುಣವತಿ ಸುವರ್ಣ ಎಂದು ಗುರುತಿಸಲಾಗಿದೆ. ಗುಣವತಿ ಸುವರ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದು, ಆತ್ಮಹತ್ಯೆಗೆ ಮುನ್ನ ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ತಾನು ತೀವ್ರವಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿ ದಿನಕ್ಕೆ ಎರಡು ಇನ್ಸುಲಿನ್ ಇಂಜೆಕ್ಷನ್ ಪಡೆದುಕೊಂಡರೂ ಸಕ್ಕರೆ ಖಾಯಿಲೆ ಹತೋಟಿಗೆ ಬರುತ್ತಿಲ್ಲ. ಇದೆಲ್ಲರ ಜೊತೆಗೆ ಜೊತೆಗೆ ಔಷದದ ಅಲರ್ಜಿ ಇದ್ದ ಮೆಡಿಸಿನ್ ಕೂಡಾ ದೇಹಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಎರಡು ಬಾರಿ ಗರ್ಭಿಣಿಯಾದರೂ ಸಮಸ್ಯೆ ಕಾಣಿಸಿಕೊಂಡು ಮಕ್ಕಳಾಗಿಲ್ಲ. ಮೊದಲ ಮಗು 13 ದಿನದಲ್ಲಿ ಮೃತಪಟ್ಟಿತ್ತು. ನಾವು 2000 ಇಸವಿಯಲ್ಲಿ ಮದುವೆಯಾಗಿದ್ದು ಸದ್ಯ ನನಗೂ ನನ್ನ ಗಂಡನಿಗೂ ಕೋವಿಡ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.ನನ್ನ ಗಂಡನಿಗೂ ಮೂರು ದಿನದಿಂದ ಕೋವಿಡ್ ಲಕ್ಷಣಗಳು ಕಾಣಿಸಿದ್ದು, ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ.ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಮತ್ತು ಇತರ ಭಾಗಗಳನ್ನು ಕಳೆದುಕೊಂಡಿದ್ದನ್ನು ನೋಡಿದಾಗ, ನನ್ನ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನನಗೂ ಭಯ ಕಾಡುತ್ತಿದೆ.ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ತಂದೆ ತಾಯಿ ತಮ್ಮನಿಗೆ ಕೋವಿಡ್ ಸೋಂಕು ತಾಗಿ ಈಗ ಚೇತರಿಸಿಕೊಂಡಿದ್ದಾರೆ. ತಾಯಿ ತುಂಬಾ ಕಷ್ಟದಿಂದ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ನಮ್ಮ ಅಂತ್ಯಕ್ರಿಯೆಯ ತೊಂದರೆ ನೀಡಬಾರದು . ನಾನು ಮತ್ತು ಗಂಡ ನಿರ್ಧರಿಸಿದ ಪ್ರಕಾರ ಹಿಂದೂ ಸಂಘಟನೆಯ ಶರಣ್ ಪಂಪ್ ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರು ನಮ್ಮ ಅಂತ್ಯಕ್ರಿಯೆಯನ್ನು ನಡೆಸಬೇಕು. ಅದಕ್ಕಾಗಿ ಒಂದು ಲಕ್ಷ ರೂ. ಇಟ್ಟಿದ್ದೇವೆ ಎಂದು ಬರೆದಿದ್ದಾರೆ. ಆತ್ಮಹತ್ಯೆಗೂ ಮೊದಲು ಪತಿ ರಮೇಶ್ ಸುವರ್ಣ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ವಾಯ್ಸ್ ಮೆಸೇಜ್ ಕಳಿಸಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಹೇಳಿಕೊಂಡಿದ್ದರು . ಶಶಿಕುಮಾರ್ ಅವರು ಕೂಡಲೇ ಕಾರ್ಯ ಪೃವೃತ್ತರಾಗಿ ದುಡುಕಿನ ನಿರ್ಧಾರ ಮಾಡದಂತೆ ಮನವಿ ಮಾಡಿದ್ದರು. ತಕ್ಷಣ ಪೊಲೀಸರ ತಂಡ ಕಳುಹಿಸಿದರೂ ಅದಾಗಲೇ ದಂಪತಿ ನೇಣಿಗೆ ಶರಣಾಗಿದ್ದರು.