ಬರಹ: ಪತ್ರಕರ್ತ ಚೇತನ್ ನಾಡಿಗೇರ್, ಫೇಸ್ ಬುಕ್ ಪುಟದಿಂದ
ಬೆಂಗಳೂರು: ಆಗಸ್ಟ್ 02, ಅಮಿತಾಭ್ ಬಚ್ಚನ್ ಅವರ ಪಾಲಿಗೆ ಬಹಳ ಮಹತ್ವದ ದಿನ. ಅಮಿತಾಭ್ ಬಚ್ಚನ್ ಹುಟ್ಟಿದ್ದು ಅಕ್ಟೋಬರ್ 11ರಂದಾದರೂ, ಅವರು ಮರುಹುಟ್ಟು ಪಡೆದಿದ್ದು ಆಗಸ್ಟ್ 02ರಂದು. ‘ಕೂಲಿ’ ಚಿತ್ರದ ಚಿತ್ರೀಕರಣದಲ್ಲಿ ಭೀಕರವಾಗಿ ಪೆಟ್ಟುತಿಂದು, ಕೋಮಾಗೆ ಜಾರಿದ್ದ ಅಮಿತಾಭ್ ಬಚ್ಚನ್ ಅವರಿಗೆ ಪ್ರಜ್ಞೆ ಬಂದಿದ್ದು 1982ರ ಇದೇ ದಿನದಂದು. ಹಾಗಾಗಿ, ಅಮಿತಾಭ್ ಬಚ್ಚನ್ ಅಭಿಮಾನಿಗಳು ಈ ದಿನವನ್ನು ಅವರ ಮರುಹುಟ್ಟುಹಬ್ಬವೆಂದು ಪರಿಗಣಿಸುತ್ತಾರೆ.
‘ಕೂಲಿ’ ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಪೆಟ್ಟುತಿಂದಿದ್ದು, ಆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಮಾಡಿದ್ದು, ಆರು ದಿನಗಳ ಕಾಲ ಕೋಮದಲ್ಲಿದ್ದ ಅವರು ಕ್ರಮೇಣ ಚೇತರಿಸಿಕೊಂಡಿದ್ದು, ಈ ಅಪಘಾತಕ್ಕೆ ಕಾರಣ ನಟ ಪುನೀತ್ ಇಸ್ಸಾರ್ ಎಂದು ಹಲವರು ಅವರಿಗೆ ಬಹಿಷ್ಕಾರ ಹಾಕಿದ್ದು, ಆರು ತಿಂಗಳ ನಂತರ ಪುನಃ ಅಮಿತಾಭ್ ಬಚ್ಚನ್ ಬಣ್ಣ ಹಚ್ಚಿದ್ದು … ಇದೆಲ್ಲದರ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿದೆ. ಆದರೆ, ಅಪಘಾತದ ದಿನದಂದು ಸರಿಯಾಗಿ ಏನಾಯಿತು ಎಂದು ಹೆಚ್ಚು ಸುದ್ದಿಯಾಗಿಲ್ಲ. ಚಿತ್ರೀಕರಣ ವೇಳೆ ಅಮಿತಾಭ್ ಧಾರುಣವಾಗಿ ಪೆಟ್ಟು ತಿಂದರು, ನೋವಿನಿಂದ ಚೀರಾಡಿದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು, ಅಷ್ಟರಲ್ಲಿ ಅವರು ಕೋಮಾಗೆ ಜಾರಿದರು ಅಂತೆಲ್ಲ ಅಂದುಕೊಂಡರೆ ಅದು ತಪ್ಪು. ಸ್ವತಃ ಅಮಿತಾಭ್ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ, ಹೊಡೆದಾಟದ ದೃಶ್ಯದಲ್ಲಿ ಕಿಬ್ಬೊಟ್ಟೆಗೆ ಪೆಟ್ಟು ಬಿದ್ದಾಗ, ನೋವಾಯಿತಾದರೂ ಅವರು ಕುಸಿದು ಬೀಳಲಿಲ್ಲವಂತೆ. ಶಾಟ್ ಓಕೆ ಆಗುತ್ತಿದ್ದಂತೆಯೇ, ಅವರು ಹೊರಗೆ ಹೋಗಿ, ಲಾನ್ ಮೇಲೆ ಕಾಲು ಚಾಚು ಮಲಗಿದರಂತೆ. ನೋವೇನೋ ಇತ್ತಂತೆ, ಆದರೆ ಅದು ಇನ್ನೊಂದು ಮಟ್ಟಕ್ಕೆ ಹೋಗಬಹುದು ಎಂಬ ಪರಿಕಲ್ಪನೆ ಅವರಿಗೂ ಇರಲಿಲ್ಲವಂತೆ. ನೋವಿನಿಂದ ಹೊಟ್ಟೆ ಉಚ್ಚಿಕೊಳ್ಳುತ್ತಾ ಮಲಗಿದ್ದ ಅವರನ್ನು ನೋಡಿದ ಕೆಲವು ಸೆಟ್ ಹುಡುಗರಿಗೆ ಬಹಳ ಖುಷಿಯಾಯಿತಂತೆ. ಅಮಿತಾಭ್ ಹತ್ತಿರ ಹೋಗಿ, ‘ಚೆನ್ನಾಗಿ ಆ್ಯಕ್ಟ್ ಮಾಡ್ತಿದ್ದೀರಾ ಮುಂದುವರೆಸಿ ಮುಂದುವರೆಸಿ …’ ಎಂದು ಹೇಳಿ ಹೊರಟು ಹೋದರಂತೆ.
ಅದಕ್ಕೆ ಕಾರಣವೂ ಇದೆ. ಆ ದೃಶ್ಯದ ಚಿತ್ರೀಕರಣಕ್ಕೂ ಮುನ್ನ ಕೆಲವು ಸೆಟ್ ಹುಡುಗರು ಅಮಿತಾಭ್ ಬಚ್ಚನ್ ಬಳಿ ಹೋಗಿ ಒಂದು ಮನವಿ ಮಾಡಿದ್ದಾರೆ. ‘ಚಿತ್ರೀಕರಣಕ್ಕೆಂದು ಮುಂಬೈನಿಂದ ಬೆಂಗಳೂರಿಗೆ ಬಂದು ಒಂದು ತಿಂಗಳಾಯಿತು. ಈ ಒಂದು ತಿಂಗಳಲ್ಲಿ ಸತತವಾಗಿ ಚಿತ್ರೀಕರಣ ಮಾಡಿದ್ದೇವೆ. ಒಂದು ದಿನ ಸಹ ಗ್ಯಾಪ್ ಇಲ್ಲ. ಸುಸ್ತಾಗಿ ಹೋಗಿದೆ. ನಿರ್ದೇಶಕರಿಗೆ ಹೇಳಿ ರಜೆ ಕೊಡಿಸಿ. ರಜೆ ಕೊಡದಿದ್ದರೆ, ಹುಷಾರಿಲ್ಲ ಅಂತಾದರೂ ಹೇಳಿ. ನಿಮಗೆ ಹುಷಾರಿಲ್ಲ ಎಂದರೆ, ನಮಗೆ ಬ್ರೇಕ್ ಸಿಗುತ್ತದೆ. ಅದರಿಂದಾದರೂ ನಾವೆಲ್ಲ ಸ್ವಲ್ಪ ಉಸಿರಾಡುವಂತಾಗುತ್ತದೆ’ ಎಂದು ಹೇಳಿಕೊಂಡಿದ್ದರಂತೆ. ಅದಕ್ಕೆ ಅಮಿತಾಭ್ ಬಚ್ಚನ್, ನಿರ್ದೇಶಕ ಮನಮೋಹನ್ ದೇಸಾಯಿ ಕೂಲ್ ಆಗಿದ್ದಾಗ ನೋಡಿಕೊಂಡು ಮಾತನಾಡುವುದಾಗಿ ಹೇಳಿ, ಆ ಹುಡುಗರನ್ನು ಕಳಿಸಿದ್ದಾರೆ.
ಯಾವಾಗ, ಅಮಿತಾಭ್ ಬಚ್ಚನ್ ಪೆಟ್ಟು ತಿಂದು ಬಂದು ಮಲಗಿದ್ದನ್ನು ಆ ಹುಡುಗರು ನೋಡಿದರೋ ಅವರಿಗೆ ಖುಷಿಯಾಯಿತಂತೆ. ನಿಜಕ್ಕೂ ಪೆಟ್ಟುಬಿದ್ದಿದೆ ಎಂದು ಗೊತ್ತಿಲ್ಲದ ಅವರು, ತಮಗೆಲ್ಲ ರಜೆ ಕೊಡಿಸುವುದಕ್ಕೆ ಅಮಿತಾಭ್ ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಅಂದುಕೊಂಡಿದ್ದರಂತೆ. ಅದೇ ಕಾರಣಕ್ಕೆ ಹತ್ತಿರ ಬಂದು, ‘ಚೆನ್ನಾಗಿ ನಟನೆ ಮಾಡ್ತಿದ್ದೀರಾ ಮುಂದುವರೆಸಿ ಮುಂದುವರೆಸಿ …’ ಎಂದು ಪಿಸುಗುಟ್ಟಿ ಹೋದರಂತೆ. ಅವರೇನೋ ನಾಟಕ ಅಂದುಕೊಂಡರು, ತಮಗೆ ನಿಜಕ್ಕೂ ಆರೋಗ್ಯ ಸಮಸ್ಯೆ ಎದುರಾಯಿತು ಎಂದು ಅಮಿತಾಭ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹುಡುಗರಿಗೆ ಒಂದೆರೆಡು ದಿನಗಳ ಬ್ರೇಕ್ ಬೇಕಿದ್ದು, ತಮ್ಮಿಂದ ಆರು ತಿಂಗಳಷ್ಟು ಸಮಯ ಬ್ರೇಕ್ ಸಿಕ್ಕಂತಾಯಿತು ಎಂದಿದ್ದಾರೆ. ಈ ಘಟನೆಯ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಂದು ಏನೇನಾಯಿತು ಎಂದು ನೆನಪಿಸಿಕೊಂಡಿದ್ದರು. ‘ಕೂಲಿ’ ನಿಮ್ಮ ಚಿತ್ರಜೀವನದಲ್ಲೇ ಒಂದು ಲ್ಯಾಂಡ್ಮಾರ್ಕ್ ಸಿನಿಮಾ ಆಯಿತಲ್ಲ ಎಂದು ನಟ ರಿಷಿ ಕಪೂರ್ ಹೇಳಿದಾಗ, ‘ಲ್ಯಾಂಡ್ಮಾರ್ಕ್ ಸಿನಿಮಾನೋ, ಅಲ್ಲವೋ ಗೊತ್ತಿಲ್ಲ. ಆದರೆ, ಸಿನಿಮಾದಿಂದ ಮಾರ್ಕ್ ಅಂತೂ ಆಯಿತು’ ಎಂದು ತಮಾಷೆ ಮಾಡಿದ್ದರು. ಹೀಗೆ ಪೆಟ್ಟು ತಿಂದ ಅಮಿತಾಭ್ ಬಚ್ಚನ್, ಪುನಃ ಕ್ಯಾಮೆರಾ ಎದುರಿಸಿದ್ದು ಆರು ತಿಂಗಳ ನಂತರ. 1983ರ ಜನವರಿ 07ರಂದು ಚಿತ್ರೀಕರಣ ‘ಕೂಲಿ’ ಪುನಃ ಪ್ರಾರಂಭವಾಯಿತಂತೆ. ಈ ಫೋಟೋ ತೆಗೆದಿದ್ದು ಸಹ ಅದೇ ದಿನದಂದು.