ಕಾಬೂಲ್: ಆಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾದಾಗಿದ್ದಿಂದ ಆ ದೇಶದ ಜನತೆ ಭಯದ ನೆರಳಿನಲ್ಲಿಯೇ ಬದುಕುತ್ತಿದ್ದಾರೆ.ತಾಲಿಬಾನ್ ಆಡಳಿತಕ್ಕೆ ಹೆದರಿ ಈಗಾಗಲೇ ಅನೇಕರು ದೇಶ ತೊರೆದಿದ್ದಾರೆ. ಉಗ್ರರಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಹಲವರ ಜೀವ ಮತ್ತು ಜೀವನ ಎರಡೂ ವಿಮಾನ ನಿಲ್ದಾಣದಲ್ಲಿಯೇ ಕಮರಿ ಹೋಗಿದೆ. ಬದುಕಿದರೆ ಭಿಕ್ಷೆ ಬೇಡಿಯಾದರೂ ತಿಂದೇನೂ ಅನ್ನುವ ತೀರ್ಮಾನಕ್ಕೆ ಬಂದಿರುವ ಅಲ್ಲಿನ ಪುರುಷರು ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿರುವ ವಿಮಾನವನ್ನೇ ಏರಿ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಆದರೆ ಅಲ್ಲಿನ ಮಹಿಳೆಯರು ತಮ್ಮ ಶಿಶುಗಳನ್ನು ರಕ್ಷಿಸಲು ಅನ್ಯ ಮಾರ್ಗವಿಲ್ಲದೇ ವಿಮಾನ ನಿಲ್ದಾಣಗಳತ್ತ ಎಸೆಯುತ್ತಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಸ್ಕೈ ನ್ಯೂಸ್ ವರದಿಯ ಪ್ರಕಾರ, ತಾಲಿಬಾನ್ ಭೀತಿಯಿಂದ ಆತಂಕಕ್ಕೆ ಒಳಗಾಗಿರುವ ಮಹಿಳೆಯರು ಕಾಬೂಲ್ ವಿಮಾನ ನಿಲ್ದಾಣದ ಗೋಡೆಗೆ ಅಳವಡಿಸಲಾಗಿರುವ ರೇಜರ್ ವೈರ್ ನ ಆಚೆ ಬದಿಗೆ ತಮ್ಮ ಶಿಶುಗಳನ್ನು ಎಸೆಯುತ್ತಿರುವ ದೃಶ್ಯಗಳು ಕಂಡುಬಂದಿದೆ. ಸ್ಕೈ ನ್ಯೂಸ್ ನ ವರದಿಗಾರ ಸ್ಟ್ರೌಟ್ ರಾಮ್ಸೆ ಅವರಿಗೆ ಪ್ರತ್ಯಕ್ಷದರ್ಶಿ ಹಿರಿಯ ಬ್ರಿಟೀಷ್ ಅಧಿಕಾರಿಯೊಬ್ಬರು ಹೇಳಿದ್ದು ಹೀಗೆ, ನಾನು ನನ್ನ ಜನರ ಬಗ್ಗೆ ಆತಂಕಿತನಾಗಿದ್ದೇನೆ, ಅವರಲ್ಲಿ ಹಲವರಿಗೆ ಸಮಾಧಾನ ಹೇಳುತ್ತಿದ್ದೇನೆ, ಮಹಿಳೆಯರು ಶಿಶುಗಳನ್ನು ರಕ್ಷಿಸುವುದಕ್ಕಾಗಿ ಎಸೆಯುತ್ತಿದ್ದ ಘಟನೆ ನೆನೆದು ಕಳೆದ ರಾತ್ರಿ ಎಲ್ಲರೂ ಕಣ್ಣೀರಿಟ್ಟಿದ್ದರು ಎಂದು ತಿಳಿಸಿದ್ದಾರೆ.