ಸುಳ್ಯ: ಕುಡಿದು ವಾಹನ ಚಲಾಯಿಸಬಾರದು ಅಂತ ಸರಕಾರವೇ ಹೇಳುತ್ತದೆ. ಡ್ರಿಂಕ್ ಅಂಡ್ ಡ್ರೈವ್ ಮಾಡುವವರಿಗೆ ಕಠಿಣ ಶಿಕ್ಷೆಯನ್ನೂ ವಿಧಿಸುತ್ತದೆ. ಇಂತಹ ನಿಯಮಗಳ ನಡುವೆಯೂ ಕೆಲವು ಅತಿ ಕುಡುಕರು ಸರಕಾರಕ್ಕೇ ಸವಾಲ್ ಎಸೆದು ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸಿ ಅವಾಂತರ ಸೃಷ್ಟಿಸುತ್ತಾರೆ. ಇಂತಹ ಘಟನೆಗೆ ಸುಳ್ಯವೂ ಈಗ ಸಾಕ್ಷಿಯಾಗಿದೆ.
ಕಂಠ ಪೂರ್ತಿ ಕುಡಿದು ನಡೆದಾಡಲೂ ಸಾಧ್ಯವಾಗದ ವ್ಯಕ್ತಿಯೊಬ್ಬ ಶುಕ್ರವಾರ ಯದ್ವಾ ತದ್ವಾ ಕಾರು ಚಲಾಯಿಸಿದ್ದಾನೆ. ಅಮಾಯಕರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಸುಳ್ಯದಿಂದ ಜಾಲ್ಸೂರು ಕಡೆಗೆ ತೆರಳುತ್ತಿದ್ದ ಪೇರಾಲಿನ ಹುಕ್ರಪ್ಪ ಗೌಡ ಎಂಬವರ ಮಗ ಮಂಜುನಾಥ್ ಕಂಠಪೂರ್ತಿ ಕುಡಿದು ಚಲಾಯಿಸುತ್ತಿದ್ದ ಮಾರುತಿ ಕಾರು ಸುಳ್ಯ ಕಡೆಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿದೆ. ಮಾತ್ರವಲ್ಲ ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ಕಾರುಗಳು ಜಖಂಗೊಂಡಿದ್ದು, ವಿಪರೀತ ಮದ್ಯಸೇವಿಸಿ ನಡೆಯುವ ಸ್ಥಿತಿಯಲ್ಲಿಲ್ಲದ ಕಾರು ಚಾಲಕ ಸೇರಿದಂತೆ ಕಾರಿನಲ್ಲಿದ್ದ ಇಬ್ಬರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.