ನವದೆಹಲಿ: ಕರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಡಿಜಿಸಿಎ ನಿಯಂತ್ರಣಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ನಿಗದಿತ ಮಾರ್ಗದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಸಂಬಂಧಿತ ಪ್ರಾಧಿಕಾರ ಅವಕಾಶ ನೀಡಲಿದೆ ಎಂದು ಅದು ತಿಳಿಸಿದೆ.
ಕರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು 2020 ಮಾರ್ಚ್ 23ರಂದು ರದ್ದುಗೊಳಿಸಲಾಗಿತ್ತು. ಆದರೆ, 2020 ಮೇಯಿಂದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಹಾಗೂ 2020 ಜುಲೈಯಿಂದ ದ್ವಿಪಕ್ಷೀಯ ‘ಏಯರ್ ಬಬಲ್’ ವ್ಯವಸ್ಥೆ ಅಡಿಯಲ್ಲಿ ನಿಗದಿತ ರಾಷ್ಟ್ರಗಳಿಗೆ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಸಂಚಾರ ನಡೆಸುತ್ತಿದ್ದವು. ಭಾರತ ಅಮೆರಿಕ, ಬ್ರಿಟನ್, ಯುಎಇ, ಕೆನ್ಯಾ, ಭೂತಾನ್ ಹಾಗೂ ಫ್ರಾನ್ಸ್ ಸೇರಿದಂತೆ ಸುಮಾರು 24 ದೇಶಗಳೊಂದಿಗೆ ‘ಏರ್ ಬಬಲ್’ ಒಪ್ಪಂದ ಮಾಡಿಕೊಂಡಿದೆ. ಉಭಯ ರಾಷ್ಟ್ರಗಳ ನಡುವಿನ ‘ಏರ್ ಬಬಲ್’ ಒಪ್ಪಂದದ ಅಡಿಯಲ್ಲಿ ಉಭಯ ರಾಷ್ಟ್ರಗಳ ವಿಮಾನ ಯಾನ ಸಂಸ್ಥೆಗಳು ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಯಾನ ನಡೆಸಬಹುದಾಗಿತ್ತು. ಅಂತಾರಾಷ್ಟ್ರೀಯ ಕಾರ್ಗೋ ವಿಮಾನಗಳ ಸಂಚಾರಕ್ಕೆ ಈ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸುತ್ತೋಲೆ ತಿಳಿಸಿದೆ.