ಬೆಂಗಳೂರು: ಸಿಎಂ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವುಗೊಂಡಿದ್ದ ಮುಖ್ಯಮಂತ್ರಿಯ ಸ್ಥಾನಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವ ಶಾಸಕ, ಮಾಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಜು.27 ರಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಸಭೆಯ ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದನ್ನು ಬಿಜೆಪಿ ನಾಯಕರು ಘೋಷಿಸಿದ್ದಾರೆ.
ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಎಸ್ಆರ್ ಬೊಮ್ಮಾಯಿ-ಚೆನ್ನಮ್ಮ ಅವರ ಪುತ್ರ. 1960 ರ ಜ.28 ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.
ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.100 ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಯಡಿಯೂರಪ್ಪ ಅವರ ಸಂಪುಟದಲ್ಲಿ ಮುಖ್ಯಮಂತ್ರಿಗಳ ಬಳಿಕ ಎರಡನೇ ಪ್ರಬಲ ಖಾತೆಯಾದ ಗೃಹ ಖಾತೆಯನ್ನೂ ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಅವರು ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದು ಜನತಾದಳದಿಂದ.
1998 ಹಾಗೂ 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. 2008 ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು.