ನ್ಯೂಸ್ ನಾಟೌಟ್: ಛತ್ತೀಸ್ ಗಢ ಮತ್ತು ತೆಲಂಗಾಣ ಗಡಿಯಲ್ಲಿ ದೇಶದ ಇತಿಹಾಸದಲ್ಲೇ ಅತಿದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭವಾಗಿದೆ. ಛತ್ತೀಸ್‌ಗಢ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ 20 ಸಾವಿರ ಭದ್ರತಾ ಸಿಬ್ಬಂದಿ ಛತ್ತೀಸ್ ಗಢ-ತೆಲಂಗಾಣ ಗಡಿಯ, ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿರುವ ಕರ್ರೆಗುಂಟ ಬೆಟ್ಟದಲ್ಲಿ ಅಡಗಿರುವ ಸುಮಾರು ಒಂದು ಸಾವಿರ ನಕ್ಸಲರ ಬೇಟೆಗಿಳಿದಿದ್ದಾರೆ. ಈಗಾಗಲೇ ಭದ್ರತಾ ಸಿಬ್ಬಂದಿ ಗುಂಡಿಗೆ ಮೂವರು ಬಲಿಯಾಗಿದ್ದು, ಕೆಲವರು ಶರಣಾಗತಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶದಿಂದ ನಕ್ಸಲೀಯರ ಸಂಪೂರ್ಣ ನಿರ್ಮೂಲನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾ.31, 2026ರ ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಕಳೆದೊಂದು ವರ್ಷದಿಂದ ಚುರುಕುಗೊಳಿಸಲಾಗಿದೆ. ಛತ್ತೀಸ್ ಗಢ ಜಿಲ್ಲಾ ಮೀಸಲುಪಡೆ (ಡಿಆರ್‌ಜಿ), ಬಸ್ತರ್ ಫೈಟರ್ಸ್ ಸ್ಪೆಷಲ್ ಟಾಸ್ಕ್ ಫೋರ್ಸ್ (ಎಸ್‌ಟಿಎಫ್), ರಾಜ್ಯ ಪೊಲೀಸ್ ಇಲಾಖೆಯ ಎಲ್ಲ ವಿಭಾಗಗಳು, ಸಿಆರ್ ಪಿಎಫ್ ಮತ್ತು ಅದರ ಕೋಬ್ರಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಕುಖ್ಯಾತ ನಕ್ಸಲರಾದ ಹಿದ್ಮಾ ಮತ್ತು ಬಟಾಲಿಯನ್ ಮುಖ್ಯಸ್ಥ ದೇವಾ ಕರ್ರೆಗುಂಟ ಬೆಟ್ಟದಲ್ಲಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇಲೆ ಭದ್ರತಾ ಸಿಬ್ಬಂದಿ ಬಿರುಸಿನ ಕೂಂಬಿಂಗ್ ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ಭಾಗವಾಗಿ ಕರ್ರೆಗುಂಟ ಬೆಟ್ಟವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿದ್ದು, ನಕ್ಸಲರಿಗೆ ತಪ್ಪಿಸಿಕೊಳ್ಳುವ ಇರುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಈ ಪ್ರದೇಶ ಕಡಿದಾದ ಗುಡ್ಡದಿಂದ ಕೂಡಿದ ದಟ್ಟ ಕಾಡಾಗಿದ್ದು, ನಕ್ಸಲರ ಬೆಟಾಲಿಯನ್ ನ ಮೂಲಸ್ಥಳ ಎನ್ನಲಾಗಿದೆ.
ಕೆಲದಿನಗಳ ಹಿಂದಷ್ಟೇ ನಕ್ಸಲರು ಪ್ರಕಟಣೆ ಹೊರಡಿಸಿ ಗ್ರಾಮಸ್ಥರಿಗೆ ಈ ಬೆಟ್ಟ ಪ್ರವೇಶಿಸಿದಂತೆ ಎಚ್ಚರಿಕೆ ನೀಡಿದ್ದರು. ಬೆಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಐಇಡಿಗಳನ್ನು ಅಳವಡಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.ನಕ್ಸಲಿಸಂಗೆ ಹೆಸರುವಾಸಿಯಾದ ಬಸ್ತಾರ್ ವೊಂದರಲ್ಲೇ ಸುಮಾರು 124 ನಕ್ಸಲಿಗರನ್ನು ಹತ್ಯೆ ಮಾಡಲಾಗಿದೆ. ಇನ್ನೂ ಕಾರ್ಯಾಚರಣೆ ಮುಂದುವರಿದಿದೆ.
ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ಎಂದ ಗೃಹ ಸಚಿವ..! ಮುಖ್ಯಮಂತ್ರಿಗಳಿಗೆ ಅಮಿತ್ ಶಾ ಸೂಚನೆ