ನ್ಯೂಸ್ ನಾಟೌಟ್: ಬಡವರ ಡಾಕ್ಟರ್ ಎಂದೇ ಖ್ಯಾತಿ ಪಡೆದಿದ್ದ 10 ರೂಪಾಯಿ ವೈದ್ಯ ರಥಿನಂ ಪಿಳ್ಳೈ ನಿಧನರಾಗಿದ್ದಾರೆ. 96 ವರ್ಷದ ರಥಿನಂ ಪಿಳ್ಳೈ , ಬಡವರಿಗೆ ಕೇವಲ 10 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. 65,000ಕ್ಕೂ ಹೆಚ್ಚು ಯಶಸ್ವಿ ಹೆರಿಗೆಗಳನ್ನು ಮಾಡಿರೋ ಖ್ಯಾತಿ ಇವರಿಗಿತ್ತು.
1929ರಲ್ಲಿ ಜನಿಸಿದ ರಥಿನಂ ಪಿಳ್ಳೈ 1959ರಲ್ಲಿ ವೈದ್ಯರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 60 ವರ್ಷಗಳ ಹಿಂದೆ ರಥಿನಂ ಪಿಳ್ಳೈ ವೈದ್ಯಕೀಯ ಚಿಕಿತ್ಸೆಗೆ ಕೇವಲ 2 ರೂಪಾಯಿಗಳನ್ನು ಮಾತ್ರ ಪಡೆಯುತ್ತಿದ್ದರು.
ಬಳಿಕ ರಥಿನಂ ಪಿಳ್ಳೈ ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈ ಪಟ್ಟಣದಲ್ಲಿ ಬಡವರಿಗೆ ಕೇವಲ 10 ರೂಪಾಯಿಗೆ ಚಿಕಿತ್ಸೆ ನೀಡಿ ಬಡವರ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದರು. ತಮ್ಮ ಕೊನೆಗಾಲದವರೆಗೂ ಕೇವಲ 10 ರೂಪಾಯಿಗಳನ್ನು ಮಾತ್ರ ಪಡೆಯುತ್ತಿದ್ದ ರಥಿನಂ ಪಿಳ್ಳೈ ಅವರನ್ನು ಮಾನವತಾವಾದಿ ಎಂದು ಕರೆಯುತ್ತಾರೆ.
ಡಾ. ರಥಿನಂ ಪಿಳ್ಳೈ ಒಬ್ಬ ನುರಿತ ವೈದ್ಯರಾಗಿದ್ದರು. 50 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ವೈದ್ಯಕೀಯ ಸೌಲಭ್ಯಗಳು ವಿರಳವಾಗಿದ್ದ ಆ ದಿನಗಳಲ್ಲಿ ಅತ್ಯಂತ ಗಂಭೀರ ಕಾಯಿಲೆಗಳನ್ನು ಸಹ ಕಡಿಮೆ ವೆಚ್ಚದಲ್ಲಿ ಗುಣಪಡಿಸಲು ಇವರು ಮುಂದಾಗಿದ್ದರು.
ಹೆರಿಗೆಗೆ ಯಾವುದೇ ಶಸ್ತ್ರಚಿಕಿತ್ಸೆಯನ್ನು ಮಾಡದೆ ಪ್ರಸೂತಿ ಆರೈಕೆಯನ್ನು ರಥಿನಂ ಪಿಳ್ಳೈ ಮಾಡಿದ್ದಾರೆ. ಬಡ ಜನರಿಗೆ ಕೇವಲ ಹತ್ತು ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಿದ್ದಕ್ಕಾಗಿ ಇವರನ್ನು ಅನೇಕರು ಪೂಜಿಸುತ್ತಾರೆ.ಇವರ ಸಮಾಜ ಸೇವೆಯನ್ನು ಮೆಚ್ಚಿ, ವಿವಿಧ ಸಮಾಜ ಕಲ್ಯಾಣ ಸಂಸ್ಥೆಗಳು ಡಾಕ್ಟರ್ ಆಫ್ ಹ್ಯುಮಾನಿಟಿ ಎಂಬ ಬಿರುದನ್ನು ನೀಡಿ ಗೌರವಿಸಿದೆ.