ನ್ಯೂಸ್ ನಾಟೌಟ್ :ಸುಮಾರು 45 ವರ್ಷಗಳಿಂದ ಯಾವುದೇ ಎಣ್ಣೆ ಹಾಗೂ ಬತ್ತಿ ಇಲ್ಲದೆ ಉರಿಯುತ್ತ ಬಂದಿದ್ದ ಮೂರು ದೀಪಗಳು ಬುಧವಾರ ಆರಿಹೋಗಿರುವುದರ ಬಗ್ಗೆ ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆ ಸಮೀಪವಿರುವ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದಲ್ಲಿ ಸುಮಾರು 4 ದಶಕಗಳಿಂದ ಎಣ್ಣೆ ಇಲ್ಲದೆ ಮೂರು ದೀಪಗಳು ಉರಿಯುತ್ತಿದ್ದವು.ಈ ಸುದ್ದಿ ಕೇಳಿ ಲಕ್ಷಾಂತರ ಭಕ್ತರು ಆತಂಕಗೊಂಡಿದ್ದಾರೆ. ಈ ದೀಪಗಳು ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ್ದು, ಪ್ರತಿದಿನವೂ ಸಾಕಷ್ಟು ಭಕ್ತರು ದೀಪಗಳ ವೀಕ್ಷಣೆಗೆ ಆಗಮಿಸುತ್ತಿದ್ದರು.
1927 ರಲ್ಲಿ ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬವರು ಸೀಮೆಎಣ್ಣೆ ಹಾಕಿ ಒಂದು ಲಾಟೀನ್ ದೀಪ ಹಚ್ಚಿದ್ದರು. ಅದು ನಿರಂತರವಾಗಿ ಉರಿಯತೊಡಗಿತು. ಅದನ್ನು ಕಂಡು ಆಶ್ಚರ್ಯಗೊಂಡಿದ್ದ ಶಾರದಮ್ಮ ೧೯೮೦ರಲ್ಲಿ ಮತ್ತೊಂದು ದೀಪ ಹಚ್ಚಿದರು. ಅದು ಕೂಡ ನಿರಂತರ ಬೆಳಗತೊಡಗಿತು. ಹದಿನೈದು ದಿನ ಬಿಟ್ಟು ಅವರು ಹಚ್ಚಿದ ಇನ್ನೊಂದು ದೀಪವೂ ಪವಾಡವೆಂಬಂತೆ ನಿರಂತರವಾಗಿ ಬೆಳಗುತ್ತ ಬಂದಿತ್ತು. ದೀಪಗಳನ್ನು ಹಚ್ಚಿದ ಶಾರದಮ್ಮ ಕೆಲವು ವರ್ಷಗಳ ನಂತರ ನಿಧನರಾದರು. ಆ ಬಳಿಕ ಅವರ ಸಂಬಂಧಿಕರು ಈ ದೀಪಗಳನ್ನು ಪೂಜಿಸುತ್ತ ಬಂದಿದ್ದರು.
ಯಾವ ಕಾರಣಕ್ಕಾಗಿ ಈ ದೀಪಗಳು ಆರಿದವು ಎಂಬುದು ತಿಳಿಯದಾಗಿದೆ.ಈ ವಿಷಯ ತಿಳಿದ ಸ್ಥಳೀಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ದೀಪನಾಥೇಶ್ವರ ದೇವಸ್ಥಾನದ ಪೂಜೆ ಮಾಡುತ್ತಿದ್ದ ವೆಂಕಟೇಶ ರಾಯ್ಕರ ಅವರು ಕಳೆದ ಜ. 23ರಂದು ವಿಧಿವಶರಾಗಿದ್ದಾರೆ. ನಂತರ ಅವರ ಸಂಸ್ಕಾರ ಕಾರ್ಯ ಗೋಕರ್ಣದಲ್ಲಿ ಮಾಡಿಕೊಂಡು ಊರಿಗೆ ಮರಳಿ ವೈಕುಂಠ ಸಮಾರಂಭ ಸಮಾರಾಧನೆ ಮುಗಿಸಿಕೊಂಡು ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆದಾಗ ದೀಪಗಳು ಆರಿಹೋಗಿದ್ದು ಕಂಡುಬಂದಿದೆ.ದೀಪ ಆರಿಹೋಗಿರುವ ಹಿನ್ನೆಲೆ ಮುಂದೇನು ಮಾಡಬೇಕು ಎಂದು ಗ್ರಾಮಸ್ಥರು ಚಿಂತಿತರಾಗಿದ್ದಾರೆ. ತುರ್ತು ಹೋಮ- ಹವನಾದಿಗಳನ್ನು ನಡೆಸಲು ತೀರ್ಮಾನಿಸಿದ್ದಾರೆ.