ನ್ಯೂಸ್ ನಾಟೌಟ್: ಭಾರತಕ್ಕೆ ಮೊದಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್ (Kapil Dev Kidnap) ಅವರ ಅಪಹರಣವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಿಂದ ಅಭಿಮಾನಿಗಳು ಒಂದು ಕ್ಷಣ ಆತಂಕಪಡುವಂತಾಗಿದೆ.
ಭಾರತ ತಂಡದ ಮಾಜಿ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ (Gautam Gambhir) ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
ಈ ವಿಡಿಯೋದಲ್ಲಿ ಇಬ್ಬರು ಕಪಿಲ್ ದೇವ್ ಅವರ ಕೈಗಳನ್ನು ದಾರದಿಂದ ಹಿಂಭಾಗಕ್ಕೆ ಕಟ್ಟಿದ್ದಾರೆ. ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿದ್ದಾರೆ. ಕಟ್ಟಡವೊಂದರ ಒಳಗಡೆಗೆ ಎಳೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಕಪಿಲ್ ಸಹಾಯಕ್ಕಾಗಿ ಹಿಂತಿರುಗಿ ನೋಡುವ ದೃಶ್ಯವನ್ನೂ ಕಾಣಬಹುದಾಗಿದೆ.
ಗೌತಮ್ ಗಂಭೀರ್ ಅವರು ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಆತಂಕ ಹೊರಹಾಕಿದ್ದಾರೆ. “ಇದು ಕಪಿಲ್ ಪಾಜಿ ಅಲ್ಲ ಎಂದು ಭಾವಿಸುವೆ, ಅವರು ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಈ ವಿಡಿಯೊ ಹಿಂದಿರುವ ಕಾರಣ ಬೇರೆಯೇ ಇದೆ. ಇದೊಂದು ಜಾಹಿರಾತಿಗಾಗಿ ಚಿತ್ರಿಸಿದ ದೃಶ್ಯವೊಂದರ ತುಣಕಾಗಿದೆ. ಹೀಗಾಗಿ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಗಂಭೀರ್ ತಮ್ಮ ಟ್ವಿಟ್ಟರ್ ನ ಕೊನೆಯ ಸಾಲುಗಳಲ್ಲಿ ತಿಳಿಸುವ ಮೂಲಕ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.