ಉಳ್ಳಾಲ: ಮಹಿಳೆಯೋರ್ವರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಮುನ್ನೂರು ಗ್ರಾಪಂ ಸದಸ್ಯನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿ ಗ್ರಾಪಂ ಸದಸ್ಯ ಬಾಬು ಶೆಟ್ಟಿ ಎಂದು ತಿಳಿದು ಬಂದಿದೆ. ನಿವೇಶನ ರಹಿತ ಮಹಿಳೆಯೊಬ್ಬರು ಸೆ.18ರಂದು ಸೈಟ್ ಗೆ ಅರ್ಜಿ ನೀಡಲೆಂದು ಮುನ್ನೂರು ಗ್ರಾಪಂಗೆ ತೆರಳಿದ್ದರು. ಈ ವೇಳೆ ಆರೋಪಿ ಬಾಬು ಅವರನ್ನು ಅಧ್ಯಕ್ಷರ ಕೊಠಡಿಗೆ ಕರೆಸಿ ಕಿರುಕುಳ ನೀಡಿದ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಫ್‌ಐ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ಉಳ್ಳಾಲ ಠಾಣೆಯಲ್ಲಿ ಕೆಲವು ದಿನಗಳ ಬಳಿಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.