ನ್ಯೂಸ್ ನಾಟೌಟ್: ಮನೆಯ ಟಿವಿ ರಿಮೋಟ್ ಒಡೆದು ಹಾಕಿದ್ದಲ್ಲದೆ, ಮಗಳಿಗೆ ಹೊಡೆದಿದ್ದ ಎನ್ನಲಾದ ಅಪ್ರಾಪ್ತ ಬಾಲಕನನ್ನು ಹತ್ಯೆಗೈದು, ಕೆಸರಿನಲ್ಲಿ ಹೂತು ಹಾಕಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ನಾತೂನ್ ಸಹಾನಿ ಎಂಬವರ ಪುತ್ರ ರಮಾನಂದ (8) ಹತ್ಯೆಗೀಡಾದ ಬಾಲಕ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಚಂದೇಶ್ವರ ಮಟ್ಟರು (36) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ಮೇ 6ರಂದು ರಾತ್ರಿ ರಮಾನಂದ ಎಂಬ ಬಾಲಕನ ಹತ್ಯೆಗೈದು, ರಾಯಸಂದ್ರ ಸಮೀಪದ ಕೆರೆ ಪಕ್ಕದಲ್ಲಿ ಹೂತು ಹಾಕಿದ್ದರು ಎನ್ನಲಾಗಿದೆ. ಬಿಹಾರ ಮೂಲದ ನಾತೂನ್ ಸಹಾನಿ ಮತ್ತು ಆರೋಪಿ ಚಂದೇಶ್ವರ ಕುಟುಂಬ ಸಮೇತ ಆರೇಳು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ರಾಯಸಂದ್ರದಲ್ಲಿ ಅಕ್ಕ-ಪಕ್ಕದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ.
ಇಬ್ಬರು ಖಾಸಗಿ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ನಾತೂನ್ ಸಹಾನಿ ಪತ್ನಿ ಅಪಾರ್ಟ್‌ಮೆಂಟ್ ನಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ಅವರ ಪುತ್ರ ರಮಾನಂದ್ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇನ್ನು ಚಂದೇಶ್ವರ ಪತ್ನಿ ಕೂಡ ಅಪಾರ್ಟ್‌ಮೆಂಟ್ ನಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ಅವರ ಪುತ್ರಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾಳೆ ಎಂದು ಪೊಲೀಸರು ಹೇಳಿದರು.
ಬಾಲಕ ರಮಾನಂದ ಮತ್ತು ಆರೋಪಿಯ ಪುತ್ರಿ ಒಟ್ಟಿಗೆ ಆಟವಾಡುತ್ತಿದ್ದು, ಕೆಲವೊಮ್ಮೆ ಜಗಳ ಮಾಡಿಕೊಳ್ಳುತ್ತಿದ್ದರು. ಆಗ ರಮಾನಂದ್, ಆರೋಪಿಯ ಪುತ್ರಿಗೆ ಹೊಡೆಯುತ್ತಿದ್ದ. ಅದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿತ್ತು. ಅದು ವಿಕೋಪಕ್ಕೆ ಹೋದಾಗ ರಮಾನಂದ ತಾಯಿ ಅವಾಚ್ಯ ಶಬ್ಧಗಳಿಂದ ಆರೋಪಿಯನ್ನು ನಿಂದಿಸಿದ್ದರು. ಒಮ್ಮೆ ರಮಾನಂದ್, ಆರೋಪಿಯ ಮನೆಯ ಟಿವಿ ರಿಮೋಟ್ ಹೊಡೆದು ಹಾಕಿದ್ದ. ಆದ್ದರಿಂದ ಆರೋಪಿ ಕೋಪಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.