ಉಪ್ಪಿನಂಗಡಿ: ಕಳೆದ ಕೆಲ ದಿನಗಳ ಹಿಂದೆ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮ ನಿವಾಸಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಮುಂಬರುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಸ್ಫೋಟಕ್ಕೆ ಸಂಚು ರೂಪಿಸಿದ್ದ ಭಯೋತ್ಪಾದಕರ ಪೈಕಿ ಆತನೂ ಓರ್ವನೆಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಏನಿದು ಪ್ರಕರಣ?
ಮೂಲತಃ ಉತ್ತರ ಪ್ರದೇಶದ ನಿವಾಸಿ ಎಂದು ಹೇಳಲಾದ 48 ವರ್ಷದ ವ್ಯಕ್ತಿ ಕಳೆದ ಜುಲೈ 28 ರಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ದೂರುದಾರ ಮಹಿಳೆ 2019 ರಲ್ಲಿ ಈತನನ್ನು ಎರಡನೇ ವಿವಾಹವಾಗಿದ್ದಳು. ಶಂಕಿತ ವ್ಯಕ್ತಿ ನೆಕ್ಕಿಲಾಡಿಯ ರಾಘವೇಂದ್ರ ಮಠ ಬಳಿ ಗ್ಯಾರೇಜ್ ನಡೆಸಿಕೊಂಡಿದ್ದ. ಈತ ನೆಕ್ಕಿಲಾಡಿಯ ಖಾಸಗಿ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಜು.18ರಂದು ವಾಹನಗಳ ಬಿಡಿ ಭಾಗಗಳನ್ನು ಖರೀದಿಸಲಿದೆ ಎಂದು ಬೆಂಗಳೂರಿಗೆ ಹೋಗಿದ್ದ. ಈತ ರಾತ್ರಿ ಪತ್ನಿಗೆ ಫೋನ್ ಮಾಡಿ ಮನೆಗೆ ಬರುತ್ತಿದ್ದೇನೆಂದು ತಿಳಿಸಿರುತ್ತಾನೆ. ಆದರೆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ದೂರಿಗೆ ಸಂಬಂಧಿಸಿ ಪೊಲೀಸ್ ತನಿಖೆ ಮುಂದುವರಿಯುತ್ತಿದ್ದಂತೆಯೇ ನಾಪತ್ತೆಯಾದ ವ್ಯಕ್ತಿ ಭಯೋತ್ಪಾದಕನೆಂಬ ಮಾಹಿತಿ ಹೊರಬಿದ್ದಿದೆ. ದೆಹಲಿ ವಿಶೇಷ ಪೊಲೀಸ್ ತಂಡದ ವಶದಲ್ಲಿರುವ ಆರು ಭಯೋತ್ಪಾದಕರ ಪೈಕಿ ಈತನೂ ಓರ್ವನಾಗಿದ್ದಾನೆ ಎಂದು ತಿಳಿದುಬಂದಿದೆ.
ನೆಕ್ಕಿಲಾಡಿ ಪರಿಸರದಲ್ಲಿ ವ್ಯವಹಾರ ನಡೆಸುತ್ತಿದ್ದ ವೇಳೆ ಈತ ಹೆಚ್ಚಾಗಿ ಹಿ೦ದೂಗಳೊಂದಿಗೆ ಬೆರೆಯುತ್ತಿದ್ದ. ಸ್ಥಳೀಯರಲ್ಲಿ ನನ್ನನ್ನೂ ಆರ್‌ಎಸ್‌ಎಸ್ ಸಂಘಟನೆಗೆ ಸೇರಿಸಿ ಎಂದೂ ಅಂಗಲಾಚುತ್ತಿದ್ದ. ಹಿಂದಿ ಹಾಗೂ ಉರ್ದುವನ್ನು ಮಾತನಾಡುತ್ತಿದ್ದ ಈತ, ಕೆಲ ಪೋನ್ ಕರೆಗೆ ಅನುಮಾನಸ್ಪದ ರೀತಿಯಲ್ಲಿ ಮಾತನಾಡುತ್ತಿದ್ದ ಎಂದು ಹೇಳಲಾಗುತ್ತಿದೆ.