ನ್ಯೂಸ್ ನಾಟೌಟ್: ತನ್ನ ವೈದ್ಯಕೀಯ ಚಿಕಿತ್ಸೆಗಾಗಿ ಗ್ರಾಹಕರ ಸೋಗಿನಲ್ಲಿ ಆಭರಣ ಪ್ರದರ್ಶನ ಮೇಳದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ನಿವೃತ್ತ ಶಿಕ್ಷಕಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಜಹೀರಾ ಫಾತೀಮಾ (64) ಬಂಧಿತೆ ಎಂದು ಗುರುತಿಸಲಾಗಿದೆ. ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 78 ಗ್ರಾಂ ಚಿನ್ನಾಭರಣ ಮತ್ತು 12 ಗ್ರಾಂನ ಒಂದು ಡೈಮಂಡ್ ಬ್ರೇಸ್‌ಲೇಟ್ ವಶಕ್ಕೆ ಪಡೆಯಲಾಗಿದೆ.
ಜ.17 ರಂದು ರಾಜಾಜಿನಗರ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ನಡೆದಿದ್ದ ಜ್ಯೂವೆಲ್ಲರಿ ಅಂಗಡಿಗಳ ಪ್ರದರ್ಶನದಲ್ಲಿ 4.75 ಲಕ್ಷ ರೂ. ಮೌಲ್ಯದ ಡೈಮಂಡ್ ಬ್ರೇಸ್‌ಲೇಟ್ ಮತ್ತು 59 ಗ್ರಾಂ ತೂಕದ ಚಿನ್ನದ ಬಳೆಗಳನ್ನು ಕಳವು ಮಾಡಿದ್ದಳು. ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿತೆ ಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾ.11 ರಂದು ತಿಳಿಸಿದ್ದಾರೆ.
ಮೈಸೂರು ಮೂಲದ ಜಹೀರಾ ಫಾತೀಮಾ ಸ್ನಾತಕೋತ್ತರ ಪದವಿ ಪಡೆದು ಕೊಂಡಿದ್ದು, 35 ವರ್ಷಗಳ ಹಿಂದೆ ಮದುವೆ ಯಾಗಿದ್ದರು. ಆದರೆ, ಎರಡೇ ವರ್ಷಕ್ಕೆ ಪತಿ ಮೃತಪಟ್ಟಿ ದ್ದರು. ಹೀಗಾಗಿ ಮಾನಸಿಕ ಖನ್ನತೆಗೊಳಗಾಗಿದ್ದರು. ಆ ಬಳಿಕ ಚೇತರಿಸಿಕೊಂಡು ದುಬೈ ಹಾಗೂ ಇತರೆ ದೇಶಗಳಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಕೊರೊನಾ ಸಂದರ್ಭದಲ್ಲಿ ಭಾರತಕ್ಕೆ ವಾಪಸ್ ಬಂದಿದ್ದು, ಮೈಸೂರಿನಲ್ಲಿ ವಾಸವಾಗಿದ್ದರು. ಈ ಮಧ್ಯೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ವೈದ್ಯರ ಸಲಹೆ ಮೇರೆಗೆ 3-4 ಬಾರಿ ಸ್ಟಂಟ್ ಅಳವಡಿಸಿದ್ದರು. ಆದರೆ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಈಕೆ ಚಿನ್ನಾಭರಣ ಕಳವು ಮಾಡಿ ವೈದ್ಯಕೀಯ ವೆಚ್ಚ ಭರಿಸಿಕೊಳ್ಳುತ್ತಿದ್ದರು ಎಂದು ತನಿಖೆಯ ವೇಳೆ ಬಯಲಾಗಿದೆ.