ನ್ಯೂಸ್ ನಾಟೌಟ್: ಶೈಕ್ಷಣಿಕ ವಿಚಾರದಲ್ಲಿ ವಿಭಿನ್ನವಾಗಿರುವ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಎರಡನೇ ವರ್ಷದ ನೇಜಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ.
ಗದ್ದೆ ಕೃಷಿಯ ಅನುಭವ ಇತ್ತೀಚಿನ ಪೀಳಿಗೆಯ ಮಕ್ಕಳಿಗೆ ತಿಳಿದೇ ಇಲ್ಲ. ರೈತ ಅನ್ನ ಬೆಳೆಯಲು ಎಷ್ಟು ಕಷ್ಟ ಪಡುತ್ತಾನೆ ಅನ್ನುವ ಕಲ್ಪನೆಯೇ ಇಲ್ಲ. ನಮ್ಮ ಮಣ್ಣಿನ ಬೆಲೆ, ಅನ್ನದ ಬೆಲೆ, ರೈತರ ಶ್ರಮದ ಬೆಲೆ ಮಕ್ಕಳಿಗೆ ಚೆನ್ನಾಗಿ ಗೊತ್ತಿರಬೇಕು ಅನ್ನುವ ಕಾರಣಕ್ಕೆ ಡಾ. ಚಂದ್ರಶೇಖರ ದಾಮ್ಲೆಯವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ನೇಜಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಭತ್ತದ ಗದ್ದೆಯ ತೆನೆ ಕೊಯ್ದು ಅದನ್ನೇ ಹೊಸ ಅಕ್ಕಿ ಊಟದ ರೂಪದಲ್ಲಿ ಮೂರು ತಿಂಗಳ ಬಳಿಕ ಮಕ್ಕಳಿಗೆ ನೀಡಲಾಗುತ್ತದೆ.
View this post on Instagram
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂಗಳೂರಿನ ರಾಮಕೃಷ್ಣಾಶ್ರಮದ ಆಡಳಿತಾಧಿಕಾರಿ ರಂಜನ್ ಸ್ವಾಮಿ ಮಾತನಾಡಿ, ‘ಆಧುನಿಕ ಜೀವನದ ಪ್ರಭಾವದಲ್ಲಿ ನಾವು ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಅನ್ನದ ಬಟ್ಟಲು ತುಂಬುವ ಧಾನ್ಯಗಳು ಎಲ್ಲಿ ಸಿಗುತ್ತವೆ..? ಮತ್ತು ಹೇಗೆ ಬೆಳೆಯುತ್ತವೆ..? ಎಂಬುದೇ ಮಕ್ಕಳಿಗೆ ಗೊತ್ತಿಲ್ಲ. ಮನೆಯಲ್ಲೂ ಅದನ್ನು ಹೇಳಿಕೊಡುತ್ತಿಲ್ಲ ಮತ್ತು ಶಾಲೆಗಳಲ್ಲೂ ಪಠ್ಯದ ಹೊರತಾಗಿ ಕಲಿಕೆಯೇ ಇಲ್ಲ. ಇಂತಹ ಸಂದರ್ಭದಲ್ಲಿ ಸ್ನೇಹ ಶಾಲೆಯಲ್ಲಿ ಭತ್ತದ ಗದ್ದೆಯನ್ನು ನಿರ್ಮಿಸಿ ಮಕ್ಕಳಿಗೆ ಭತ್ತವನ್ನು ಬೆಳೆದು ಅಕ್ಕಿಯನ್ನು ಪಡೆಯುವ ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವುದು ಅನುಕರಣೀಯ ಕಾರ್ಯ. ಡಾ. ಚಂದ್ರಶೇಖರ ದಾಮ್ಲೆಯವರ ಕಾರ್ಯ ಅನುಕರಣೀಯ’ ಎಂದು ತಿಳಿಸಿದರು.
ಸ್ನೇಹ ಸಂಸ್ಥೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆಯವರು ಸ್ವಾಗತಿಸಿದರು. ತೆನೆ ನೆಡುವಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಪೋಷಕರು, ನಿತ್ಯಾನಂದ ಗುಂಡ್ಯ, ಆಡಳಿತ ಮಂಡಳಿಯವರು ಭಾಗವಹಿಸಿದರು. ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ವಂದನಾರ್ಪಣೆ ಮಾಡಿದರು.