ಸುಳ್ಯ: ನಗರದ ಕೆ.ಎಸ್.ಆರ್.ಟಿ .ಸಿ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿ ನಡುವೆ ಅಪಾಯಕಾರಿ ಹೊಂಡ ನಿರ್ಮಾಣಗೊಂಡು ವಾಹನ ಸವಾರರ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ತಿಂಗಳ ಹಿಂದೆ ಇದೇ ಜಾಗದಲ್ಲಿ ಹೊಂಡ ನಿರ್ಮಾಣವಾಗಿತ್ತು. ಅನೇಕ ವಾಹನ ಸವಾರರು ಬಿದ್ದು ಎದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಬಳಿಕ ಕಾಂಕ್ರೀಟಿಕರಣ ಮಾಡಿ ದುರಸ್ತಿ ಮಾಡಲಾಗಿತ್ತು. ಇದೀಗ ಕಾಂಕ್ರೀಟಿಕರಣ ಮಾಡಿದ ಜಾಗದಲ್ಲಿ ಮತ್ತೆ ಹೊಂಡ ನಿರ್ಮಾಣವಾಗಿದ್ದು ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬಿದ್ದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ಇದನ್ನು ಶೀಘ್ರ ದುರಸ್ತಿ ಪಡಿಸಿ ಅನಾಹುತ ಸಂಭವಿಸುವುದನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಳಚರಂಡಿಯ ಅವೈಜ್ಞಾನಿಕ ಕಾಮಗಾರಿಯೇ ಇಂದಿನ ಈ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಈ ಸಂಬಂಧ 2019 ರಲ್ಲಿ ಆರ್ ಟಿ ಐ ಕಾರ್ಯಕರ್ತ ಶಾರೀಕ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ವಿಚಾರಣೆಯ ಹಂತದಲ್ಲಿದೆ.