ನ್ಯೂಸ್ ನಾಟೌಟ್: ಬಹುಭಾಷಾ ನಟಿ ಸೌಂದರ್ಯ ಅಪಘಾತವೊಂದರಲ್ಲಿ ಪ್ರಾಣ ಕಳೆದುಕೊಂಡ ಘಟನೆ ಬಗ್ಗೆ ನಿಮ್ಗೆ ಗೊತ್ತಿದೆ. ಚಿತ್ರರಂಗದಲ್ಲಿ ಮಿಂಚುತ್ತಿದ್ದ ಸಮಯದಲ್ಲೇ ಅವರು 27ನೇ ವಯಸ್ಸಿನಲ್ಲಿ ವಿಧಿವಶವಾಗಿದ್ದು ದುರಂತ. 2004 ಏ. 7ರಂದು ಬೆಂಗಳೂರಿನಿಂದ ವಿಮಾನದಲ್ಲಿ ಹೊರಟಿದ್ದ ಸೌಂದರ್ಯ ಅವರು ಅಪಘಾತದಲ್ಲಿ ಮೃತಪಟ್ಟರು.
1992ರಲ್ಲಿ ‘ಗಂಧರ್ವ’ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದ ಅವರು ಕೊನೆಯದಾಗಿ ʼಆಪ್ತಮಿತ್ರʼ ಚಿತ್ರದಲ್ಲಿ ನಟಿಸಿದ್ದರು.ಸೌಂದರ್ಯ ನಿಧನರಾಗಿ ದಶಕಗಳೇ ಕಳೆದಿದೆ. ಆದರೆ ಅವರ ಸಾವು ಆಕಸ್ಮಿಕ ಅಲ್ಲ. ಅದೊಂದು ಕೊಲೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.!
ಟಾಲಿವುಡ್ ನ ಹಿರಿಯ ನಟ ಮೋಹನ್ ಬಾಬು (Mohan Babu) ವಿರುದ್ಧ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ಏದುರು ಗಟ್ಲ ಚಿಟ್ಟಿಬಾಬು ಎನ್ನುವವರು ದೂರು ದಾಖಲಿಸಿದ್ದು, ಸೌಂದರ್ಯ ಸಾವಿನ ಹಿಂದೆ ಮೋಹನ್ ಬಾಬು ಅವರ ಕೈವಾಡ ಇದೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ನಟಿ ಸೌಂದರ್ಯ ಅವರು ಶಂಷಾಬಾದ್ ವ್ಯಾಪ್ತಿಯ ಜಲ್ಪಲ್ಲಿ ಎನ್ನುವ ಗ್ರಾಮದಲ್ಲಿ 6 ಎಕರೆ ಭೂಮಿಯನ್ನು ಖರೀದಿಸಿದ್ದರು. ಈ ಜಾಗವನ್ನು ಮೋಹನ್ ಬಾಬು ತಮಗೆ ಮಾರಾಟ ಮಾಡಿ ಎಂದು ಹೇಳಿದ್ದರು. ಆದರೆ ಸೌಂದರ್ಯ ಅವರ ಸಹೋದರ ಇದಕ್ಕೆ ಒಪ್ಪಿರಲಿಲ್ಲ. ಈ ಕಾರಣದಿಂದ ಇದು ಮೋಹನ್ ಬಾಬು ಅವರ ಕೋಪಕ್ಕೆ ಕಾರಣವಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.ಏ.7 ರಂದು ಸೌಂದರ್ಯ ಹಾಗೂ ಅವರ ಸಹೋದರ ಬೆಂಗಳೂರಿನಿಂದ ತೆಲಂಗಾಣ ಪಾರ್ಟಿ ಪ್ರಚಾರಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಅವರನ್ನು ಸಾಕ್ಷ್ಯ ಸಿಗದಂತೆ ವಿಮಾನ ಅಪಘಾತದಲ್ಲಿ ಕೊಲೆ ಮಾಡಿಸಿದರು. ಆ ನಂತರ ಆರು ಎಕರೆ ಗೆಸ್ಟ್ ಹೌಸ್ ನ್ನು ಅಕ್ರಮವಾಗಿ ಬಳಸಿಕೊಂಡರು ಎಂದು ಚಿಟ್ಟಿಬಾಬು ದೂರಿನಲ್ಲಿ ಹೇಳಿದ್ದಾರೆ.
ಆಕ್ರಮಿಸಿಕೊಂಡಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬೇಕೆಂದು ಖಮ್ಮಂ ಎಸಿಪಿ ಮತ್ತು ಖಮ್ಮಂ ಜಿಲ್ಲಾಧಿಕಾರಿಗಳಿಗೆ ಚಿಟ್ಟಿಬಾಬು ದೂರು ನೀಡಿದ್ದಾರೆ.ತನಗೆ ಮೋಹನ್ ಬಾಬು ಅವರಿಂದ ಜೀವ ಬೆದರಿಕೆ ಇದೆ. ರಕ್ಷಣೆ ಬೇಕು ಎನ್ನುವುದರ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಸದ್ಯ ಈ ದೂರು ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಮೋಹನ್ ಬಾಬು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.