ಮಂಗಳೂರು : ಕಚೇರಿಯಲ್ಲಿ ಸಹೋದ್ಯೋಗಿ ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್ ಫಾರೂಕ್ (45) ನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಯುವತಿ ಪಾಂಡೇಶ್ವರದ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕೆಲಸಕ್ಕಿದ್ದಳು. ಆಕೆಯನ್ನು ಲೈಂಗಿಕ ಕಿರುಕುಳ ನೀಡಲು ಯತ್ನಿಸಿ, ವಾಟ್ಸಪ್ ನಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯ ಪಡಿಸುತ್ತಿದ್ದ. ಅಲ್ಲದೆ, ನಿನ್ನ ನಗ್ನ ಚಿತ್ರವನ್ನು ಕಳುಹಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ. ಇದಕ್ಕೆ ಸೊಪ್ಪು ಹಾಕದ ಯುವತಿ, ಆತನಿಂದ ದೂರವಿದ್ದಳು. ಈ ನಡುವೆ, ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಆಕೆಯ ಮೈಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆನಂತರ, ಕೆಲಸವನ್ನೇ ಬಿಟ್ಟು ತೆರಳಿದ್ದ ಯುವತಿ ಎರಡು ದಿನಗಳ ಹಿಂದೆ ಅಧಿಕಾರಿ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ರಾತ್ರಿ ಮೊಹಮ್ಮದ್ ಫಾರೂಕ್ ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ 354 ಎ, 364 ಡಿ ಮತ್ತು 506 ಸೆಕ್ಷನ್ ಪ್ರಕಾರ ಕೇಸು ದಾಖಲಾಗಿದೆ. ಕಿರುಕುಳಕ್ಕೀಡಾದ ಸಂತ್ರಸ್ತೆ ಮುಸ್ಲಿಂ ಯುವತಿಯಾಗಿದ್ದು ಕಾಂಟ್ರಾಕ್ಟ್ ನೆಲೆಯಲ್ಲಿ ಪಾಂಡೇಶ್ವರದ ನಿಗಮದ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು.