ಮಂಗಳೂರು: ನಗರ ಮತ್ತೊಂದು ನೈತಿಕ ಪೋಲಿಸ್ ಗಿರಿಗೆ ಸಾಕ್ಷಿಯಾಗಿದೆ. ನಿನ್ನೆ ತಡರಾತ್ರಿ ಸುರತ್ಕಲ್ ನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರು ಜನ ಯುವಕರನ್ನು ಪೋಲಿಸರು ಬಂಧಿಸಿದ್ದಾರೆ. ಮೊಹಮ್ಮದ್ ಯಾಸೀನ್ ಮತ್ತು ಆತನ ಸ್ನೇಹಿತೆ ಆನ್ಸಿ ವಿನ್ನಿ ಡಯಾಸ್ ಹಲ್ಲೆಗೀಡಾದವರು.
ಘಟನೆಯ ಹಿನ್ನೆಲೆ :
ಸುರತ್ಕಲ್ ನ ಮುಕ್ಕ ಶ್ರೀನಿವಾಸ್ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಆನ್ಸಿ ವಿನ್ನಿ ಡಯಾಸ್ ಎಂಬ ವಿದ್ಯಾರ್ಥಿನಿ ತನ್ನ ಗೆಳೆಯ ಮೊಹಮನೊಂದಿಗೆ ಮುಕ್ಕದಿಂದ ಸುರತ್ಕಲ್ ನ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್ ಮೆಂಟ್ ಗೆ ರಾತ್ರಿ ಹತ್ತು ಗಂಟೆಗೆ ತೆರಳುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿ ಬಂದು ಅಡ್ಡಗಟ್ಟಿದ ಯುವಕರ ತಂಡ ತೀರಾ ಕೀಳು ದರ್ಜೆಯ ಪದ ಪ್ರಯೋಗ ನಡೆಸಿ ಅವಾಚ್ಯ ಶಬ್ದಗಳಿಂದ ಬಯ್ದಿದ್ದಾರೆ ಎಂದು ದೂರಲಾಗಿದೆ. ತಂಡದ ಯುವಕರು ಹಿಂದೂ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.