ಚಿಕ್ಕಮಗಳೂರು: ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನ ಮೂಡಿಗೆರೆ ಎಂಬಲ್ಲಿ ಪರಿಶಿಷ್ಟ ಜಾತಿಯ ಯುವಕನಿಗೆ ಠಾಣೆಯಲ್ಲಿ ಮೂತ್ರ ನೆಕ್ಕಿಸಿದ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಮೇಲೆ ಪ್ರಕರಣ ದಾಖಲಾಗಿತ್ತು. ಕಿರಗುಂದದ ಪುನೀತ್ ಎಂಬವರಿಗೆ ಗೋಣಿಬೀಡು ಠಾಣೆಯಲ್ಲಿ ಮೂತ್ರ ನೆಕ್ಕಿಸಿದ್ದಾರೆ ಎಂಬ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಜುನ್ ನನ್ನು ಬೆಂಗಳೂರಿನಲ್ಲಿ ಸೆ.1ರಂದು ಸಿಐಡಿ ಪೊಲೀಸರು ಬಂಧಿಸಿದ್ದರು. ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನಗರದ ಒಂದನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಸೋಮವಾರ ಜಾಮೀನು ನೀಡುವುದಕ್ಕೆ ನಿರಾಕರಿಸಿದೆ. ನ್ಯಾಯಾಧೀಶೆ ಬಿ. ಪುಷ್ಪಾಂಜಲಿ ಅವರು ಅರ್ಜಿ ವಿಚಾರಣೆ ನಡೆಸಿದರು. ಕೆಲ ದಿನಗಳ ಹಿಂದೆ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು.