ಪಾಣತ್ತೂರು: ಸುಳ್ಯ-ಪಾಣತ್ತೂರು ಅಂತಾ ರಾಜ್ಯ ರಸ್ತೆಯ ಪರಿಯಾರಂ ಎಂಬಲ್ಲಿ ನಡೆದ ಭೀಕರ ಲಾರಿ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮರಗಳನ್ನು ತುಂಬಿಸಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ. ವರ್ಷದ ಆರಂಭದಲ್ಲಿ ಬಸ್ ಮಗುಚಿ ಅದೇ ಸ್ಥಳದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.
ದುರ್ಘಟನೆಯಲ್ಲಿ ಲಾರಿಯಲ್ಲಿದ್ದ 4 ಮಂದಿ ಮೃತಪಟ್ಟಿದ್ದು ಮೃತಪಟ್ಟವರನ್ನು ಪಾಣತ್ತೂರು ಸಮೀಪದ ಕುಂಡುಪಳ್ಳಿಯವರು ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದವರ ಪೈಕಿ 5 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಮರ ತುಂಬಿದ ಲಾರಿ ಕಲ್ಲಪಳ್ಳಿಯಿಂದ ಪಾಣತ್ತೂರು ಕಡೆಗೆ ತೆರಳುತ್ತಿತ್ತು. ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.