ನ್ಯೂಸ್ ನಾಟೌಟ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರೈಲು ಮೇಲಿನ ದಾಳಿಯಲ್ಲಿ ಭಾರತದ ಕೈವಾಡ ಇದೆ ಎಂಬ ಪಾಕಿಸ್ತಾನ ಆರೋಪ ಮಾಡಿತ್ತು. ಇದಕ್ಕೆ ಭಾರತ ಈಗ ಉತ್ತರ ನೀಡಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.
‘ಪಾಕಿಸ್ತಾನದ ಆಧಾರರಹಿತ ಆರೋಪಗಳನ್ನು ಭಾರತ ಬಲವಾಗಿ ತಿರಸ್ಕರಿಸುತ್ತದೆ. ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ತನ್ನ ಆಂತರಿಕ ಸಮಸ್ಯೆ ಹಾಗೂ ವೈಫಲ್ಯಗಳಿಗೆ ಇತರರನ್ನು ಬೊಟ್ಟು ಮಾಡಿ ಹೊಣೆಗಾರರನ್ನಾಗಿಸುವ ಬದಲು ತನ್ನೊಳಗಿನ ಸಮಸ್ಯೆಗಳನ್ನು ನೋಡುವುದು ಒಳಿತು’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
Our response to media queries on the remarks made by the Pakistan side ⬇️
🔗 https://t.co/8rUoE8JY6A pic.twitter.com/2LPzACbvbf
— Randhir Jaiswal (@MEAIndia) March 14, 2025
ಈ ಮೊದಲು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಶಾಫ್‌ಕತ್ ಅಲಿ ಖಾನ್, ‘ಜಾಫರ್ ಎಕ್ಸ್ ಪ್ರೆಸ್ ದಾಳಿ ಮಾಡಿದ ಉಗ್ರರು ಅಫ್ಗಾನಿಸ್ತಾನದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹರಡುವುದಲ್ಲಿ ಭಾರತದ ಪಾತ್ರವೂ ಇದೆ’ ಎಂದು ಆರೋಪಿಸಿದ್ದರು.
ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೆಶಾವರಕ್ಕೆ ಒಂಬತ್ತು ಬೋಗಿಗಳ ಜಾಫರ್ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿತ್ತು. ಪರ್ವತಗಳಿಂದ ಕೂಡಿದ ಬಲೂಚಿಸ್ತಾನ್ ನ ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದಲ್ಲಿ ರೈಲು ಹಳಿ ಮೇಲೆ ಪ್ರತ್ಯೇಕತಾವಾದಿ ಗುಂಪು ಬಾಂಬ್ ಸ್ಫೋಟಿಸಿ, ಸುಮಾರು 450 ಪ್ರಯಾಣಿಕರಿದ್ದ ರೈಲಿಗೆ ನುಗ್ಗಿ, ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡಿತ್ತು. ಬುಧವಾರ ತಡರಾತ್ರಿ ಕೊನೆಗೊಂಡ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ 340ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಇದನ್ನೂ ಓದಿ: 15 ದಿನಗಳಲ್ಲಿ ಮನೆ ಬಾಗಿಲಿಗೆ ಬರಲಿದೆ ರಾಜ್ಯದ 400 ದೇಗುಲಗಳ ಪ್ರಸಾದ..! ಮುಜರಾಯಿಯಿಂದ ಇ-ಪ್ರಸಾದ ಸೇವೆಯಲ್ಲಿ ಹೊಸ ಪ್ರಯೋಗ..!