ಮಡಿಕೇರಿ:-ತಾಲ್ಲೂಕಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 32 ಕುಟುಂಬಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿ ಚೀಟಿಯನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ವಿತರಿಸಿದರು.
ನಗರದ ತಾಲ್ಲೂಕು ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಾಜೆ, ಭಾಗಮಂಡಲ ಹೋಬಳಿಯ ಪೆರಾಜೆ, ಹಾಕತ್ತೂರು, ಚೆಂಬು, ಮದೆ, ಕೊಳಗದಾಳು, ಬೆಟ್ಟತ್ತೂರು, ಕೋರಂಗಾಲ, ಕಗ್ಗೋಡ್ಲು, ಬೇಂಗೂರು, ಕಾರುಗುಂದ, ತಾವೂರು ಮತ್ತಿತರ ಗ್ರಾಮಗಳ ಅರ್ಹರಿಗೆ ಸಾಗುವಳಿ ಚೀಟಿ ವಿತರಿಸಿದರು. ಬಳಿಕ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ಕುಟುಂಬಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿ ಚೀಟಿ ವಿತರಿಸಲಾಗಿದ್ದು ಭೂಮಿಯನ್ನು ಯಾರು ಮಾರಿಕೊಳ್ಳಬಾರದು ಎಂದರು. ಸಾಗುವಳಿ ಚೀಟಿ ನೀಡಿದ ಭೂಮಿಯಲ್ಲಿ ಮನೆ ನಿರ್ಮಾಣ, ಕೃಷಿ ಚಟುವಟಿಕೆ ಕೈಗೊಳ್ಳಬಹುದಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಹೇಳಿದರು.
ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ ಹಲವು ದಶಕಗಳಿಂದ ಸಾಗುವಳಿ ಚೀಟಿ ಇಲ್ಲದೆ ಉಳುಮೆ ಮಾಡುತ್ತಿರುವ ಕುಟುಂಬಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಶಾಸಕರಾದ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಹಲವು ಸಮಸ್ಯೆಗಳ ನಡುವೆಯೂ ಅರ್ಹರಿಗೆ ಹಕ್ಕು ಪತ್ರ ನೀಡಲು ಕಂದಾಯ ಇಲಾಖೆ ಶ್ರಮಿಸಿದೆ ಎಂದು ತಹಶೀಲ್ದಾರ್ ಅವರು ಹೇಳಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಉಪಾಧ್ಯಾಯ, ತಾ.ಪಂ.ಮಾಜಿ ಸದಸ್ಯರಾದ ಅಪ್ರು ರವೀಂದ್ರ, ಶಿರಸ್ತೆದಾರರಾದ ಗುರುರಾಜ್, ದೇವರಾಜ್, ರಮೇಶ್ ಇತರರು ಇದ್ದರು.