ಮಂಗಳೂರು: ರಸ್ತೆ ಅಪಘಾತಕ್ಕೀಡಾಗಿದ್ದ ಇಬ್ಬರು ಯುವಕರನ್ನು ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಟ್ಟು ಶಾಸಕರೊಬ್ಬರು ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಬಿ.ಎ.ಮೊಹಿದೀನ್ ಬಾವ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿರುವಾಗ ಪುತ್ತೂರಿನ ಇಬ್ಬರು ಯುವಕರು ಬೈಕ್ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಇದನ್ನು ನೋಡಿದ ಶಾಸಕರು ತಕ್ಷಣ ತನ್ನ ಕಾರು ನಿಲ್ಲಿಸಿ ಗಾಯಾಳುಗಳಿಬ್ಬರನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದರು. ಕೌಶಿಕ್ ಮತ್ತು ಹೇಮಂತ್ ಎಂಬ ಇಬ್ಬರು ಯುವಕರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.