ಕ್ರೈಂ

ಮಂಗಳೂರು ‌: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ, ವಕೀಲನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

18

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ತನ್ನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಗಳೂರಿನ ಲೋಕಾಯುಕ್ತ ವಿಶೇಷ ಸರ್ಕಾರಿ ನ್ಯಾಯವಾದಿ ಕೆ.ಎಸ್.ಎನ್​ ರಾಜೇಶ್​ ಭಟ್ ಇನ್ನೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದು ಇನ್ನೂ ಆತನ ಬಂಧನವಾಗಿಲ್ಲ.

ಹಲವು ಬಾರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಬಂಧನದಿಂದ ಬಚಾವ್ ಆಗಲು ಪ್ರಯತ್ನಿಸಿದ್ದ. ಆದರೆ ಇದೀಗ ಹೈಕೋರ್ಟ್ ನಿಂದಲೂ ಜಾಮೀನು ನಿರಾಕರಣೆಯಾಗಿದೆ ಎಂಬ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಎನ್. ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್​ನಲ್ಲಿ ನ್ಯಾಯವಾದಿಗೆ ಯಾಕೆ ಜಾಮೀನು ದೊರೆಯಬಾರದು ಎಂದು ನಾವು ಕೋರ್ಟ್​ಗೆ ಮನವರಿಕೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ವಾರೆಂಟ್​​ ರಹಿತ ಬಂಧನ ಆದೇಶವನ್ನು ನ್ಯಾಯಾಲಯ ಹೊರಡಿಸಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ್ದಾರೆ. ಈಗಾಗಲೇ ಆತನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ನ್ಯಾಯವಾದಿಗೆ ಕೃತ್ಯಕ್ಕೆ ಹಾಗೂ ಕೃತ್ಯದ ಬಳಿಕ ಸಹಕರ ನೀಡಿದವರನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದ್ದು, ಶೀಘ್ರ ಆರೋಪಿಯನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ಶಶಿಕುಮಾರ್ ಎನ್. ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಆರೋಪಿಯ ಬಂಧನಕ್ಕೆ ಹರಸಾಹಸಪಡುತ್ತಲೇ ಇದ್ದರೂ ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲ ಎನ್ನಲಾಗುತ್ತಿದೆ.‌ ಅಲ್ಲದೇ ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲೇಬೇಕೆಂಬ ಒತ್ತಡ ಪೋಲಿಸರ ಮೇಲಿದ್ದರೂ ಬಂಧನ ಸಾಧ್ಯವಾಗದೇ ಇರುವ ಬಗ್ಗೆ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗುತ್ತಿದೆ.