ನ್ಯೂಸ್ ನಾಟೌಟ್: ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.
ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಮನೆ ಮಾಲಕ ಕಾಂತಪ್ಪ ಪೂಜಾರಿಯವರ ಸೊಸೆ ಅಶ್ವಿನಿ ಮತ್ತು ಇಬ್ಬರು ಮೊಮ್ಮಕ್ಕಳ ಪೈಕಿ ಒಂದು ಮಗು ಮೃತಪಟ್ಟಿದೆ ಎನ್ನಲಾಗಿದೆ. ಈ ಹಿಂದೆ ಕಾಂತಪ್ಪ ಪೂಜಾರಿಯವರ ಹೆಂಡದಿ ಸಾವನ್ನಪ್ಪಿದ್ದರು.
ಅವಶೇಷಗಳಡಿ ಸಿಲುಕಿರುವ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ತಾಯಿ ಅಶ್ವಿನಿ ಉಸಿರಾಡುತ್ತಿದ್ದು, ಕೈಗಳನ್ನು ಅಲ್ಲಾಡಿಸುತ್ತಿದ್ದಾರೆ ಎಂದು ಎನ್ನಲಾಗಿದೆ.
ಮೃತಪಟ್ಟಿರುವ ಮಗುವನ್ನು ಅವಶೇಷಗಳಡಿಯಿಂದ ರಕ್ಷಣಾ ತಂಡ ಹೊರತೆಗೆದಿದೆ. ತಾಯಿ ಮತ್ತು ಇನ್ನೊಂದು ಮಗುವಿನ ರಕ್ಷಣಾ ಕಾರ್ಯ ಮುಂದುವರಿದಿದೆ.
ಶುಕ್ರವಾರ ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಸಂಭವಿಸಿದ ಈ ದುರಂತದಲ್ಲಿ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಸಿದ ಮನೆಯೊಳಗೆ ಸಿಲುಕಿದ್ದ ಕಾಂತಪ್ಪ ಪೂಜಾರಿ ಹಾಗೂ ಅವರ ಪುತ್ರ ಸೀತಾರಾಮರನ್ನು ರಕ್ಷಿಸಲಾಗಿದೆ. ಕಾಂತಪ್ಪರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೀತಾರಾಮರ ಅವರ ಪತ್ನಿ ಅಶ್ವಿನಿ ಹಾಗೂ 3 ಹಾಗೂ 2 ವರ್ಷದ ಇಬ್ಬರು ಮಕ್ಕಳು ಕುಸಿದ ಮಣ್ಣು ಮತ್ತು ಮನೆಯ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಒಂದು ಮಗು ಸಾವನ್ನಪ್ಪಿದ್ದರೆ, ತಾಯಿ ಹಾಗೂ ಇನ್ನೊಂದು ಜೀವನ್ಮರಣ ಹೋರಾಟ ನಡೆಸುತ್ತಿದೆ.