ನ್ಯೂಸ್ ನಾಟೌಟ್: ಇತ್ತೀಚೆಗೆ ವಿಧ ವಿಧವಾದ ರಂಗು ರಂಗಿನ ತೊಟ್ಟಿಲುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹಿಂದೆ ಏನಿದ್ದರೂ ಮರದ ತೊಟ್ಟಿಲೇ ಪುಟ್ಟ ಮಕ್ಕಳಿಗೆ ನಿದ್ರೆ ಮಾಡಲು ಅನುಕೂಲವಾಗುತ್ತಿತ್ತು. ತೊಟ್ಟಿಲು ಅಂದಾಗ ಬಹಳ ನಾಜೂಕಿನ ಹಾಗೂ ಉತ್ತಮ ಗುಣಮಟ್ಟದ ತೊಟ್ಟಿಲು ಇರಬೇಕಾಗುತ್ತದೆ.ಹೀಗಾಗಿ ಹಿಂದಿನವರ ಹೆಚ್ಚಿನವರ ಆಯ್ಕೆಯೇ ಮರದ ತೊಟ್ಟಿಲಾಗಿತ್ತು.ಇದೀಗ ಉಡುಪಿ ಮಲ್ಪೆಯಲ್ಲೊಂದು ಮರದ ತೊಟ್ಟಿಲು ಕಾಣ ಸಿಕ್ಕಿದ್ದು, ಈ ತೊಟ್ಟಿಲಿಗೆ ಬರೋಬ್ಬರಿ 122 ವರ್ಷಗಳು ಆಗಿವೆ ಅಂದರೆ ಎಲ್ಲರೂ ಅಚ್ಚರಿ ಪಡುವ ವಿಚಾರ. ಮತ್ತೂ ಒಂದು ವಿಶೇಷವೆಂದರೆ ಈಗಲೂ ಇದರಲ್ಲಿ ಮಕ್ಕಳು ಮಲಗಿ, ಆಟವಾಡಿ, ಬೆಳೆಯುತ್ತಿದ್ದಾರೆ. ಇದರಲ್ಲಿ ಮಲಗಿದ ಮಕ್ಕಳ ಸಂಖ್ಯೆ ಬರೋಬ್ಬರಿ 500ಕ್ಕೂ ಅಧಿಕ ಎಂದರೆ ನಂಬೋದಕ್ಕೆ ಅಸಾಧ್ಯವಾದ ಮಾತು.
ಈ ಶತಮಾನಗಳ ಇತಿಹಾಸ ಹೊಂದಿರುವ ತೊಟ್ಟಿಲು ಇರುವುದು ಉಡುಪಿ ಪಂದುಬೆಟ್ಟು ಸಮೀಪದ ಗೋಪಾಲ ಸಿ. ಬಂಗೇರ ಅವರ ಮನೆಯಲ್ಲಿ. ಮಲ್ಪೆ ಕಲ್ಮಾಡಿ ದೊಡ್ಡಮನೆ ದಿ| ಸಾಹುಕಾರ್ ಬಪ್ಪ ಪೂಜಾರಿ ಅವರು 1903ರಲ್ಲಿ ತಮ್ಮ ಮಕ್ಕಳಿಗೆ ಮಲ್ಪೆ ಬಾಪುತೋಟದ ದೊಡ್ಡ ಮನೆಯಲ್ಲಿ ಈ ತೊಟ್ಟಲು ನಿರ್ಮಿಸಿದ್ದಾರೆ. ಆ ಕುಟುಂಬದ ಏಳು ತಲೆಮಾರಿನ ಮಕ್ಕಳು ಈ ತೊಟ್ಟಿಲಲ್ಲಿ ಮಲಗಿ ದೊಡ್ಡವರಾಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ಅಚ್ಚರಿಗೂ ಕಾರಣವಾಗಿದೆ.
ಕುಟುಂಬದ ಯಾರ ಮನೆಯಲ್ಲಿ ಮಗು ಹುಟ್ಟಿದರೂ ಈ ತೊಟ್ಟಿಲಿಗೆ ಮರದ ಎಣ್ಣೆ ಬಳಿದು ತಮ್ಮ ಮನೆಗೆ ಕೊಂಡು ಹೋಗಿ ಬಳಸುವ ವಾಡಿಕೆ ಇತ್ತು ಎಂದು ಹೇಳಲಾಗುತ್ತಿದೆ. ಬಳಿಕ ಅಷ್ಟೇ ಜತನದಿಂದ ಮಲ್ಪೆ ದೊಡ್ಡ ಮನೆಗೆ ಹಿಂದಿರುಗಿಸಲಾಗುತ್ತಿತ್ತು. ಬಹಳ ಪುರಾತನ ಮನೆಯಾದ ಕಾರಣ, ಮನೆ ದುರಸ್ತಿ ಮಾಡುವ ಸಂದರ್ಭದಲ್ಲಿ ಇದನ್ನು ಏನು ಮಾಡುವುದು ಎಂಬ ಪ್ರಶ್ನೆ ಬಂದಾಗ ಮೂರನೇ ತಲೆಮಾರಿನ ಮೊಮ್ಮಗಳು ಪಂದುಬೆಟ್ಟುವಿನ ವಿಜಯಾ ಗೋಪಾಲ ಬಂಗೇರ ಜವಾಬ್ದಾರಿ ವಹಿಸಿಕೊಂಡು ಇದೀಗ ತಮ್ಮ ಮನೆಯಲ್ಲಿರಿಸಿಕೊಂಡು ಕಾಪಾಡಿಕೊಂಡಿದ್ದಾರೆ.ಹಿಂದಿನಂತೆ ಈಗಲೂ ಯಾರ ಮನೆಯಲ್ಲಿ ಶಿಶು ಜನಿಸಿದರೂ , ತೊಟ್ಟಿಲನ್ನು ಪಂದುಬೆಟ್ಟು ಮನೆಯಿಂದಲೇ ಕೊಂಡುಹೋಗಿ ಇಲ್ಲಿಗೆ ತಂದು ಕೊಡುವ ಪದ್ದತಿ ನಡೆದುಕೊಂಡು ಬರುತ್ತಿದೆ ಅನ್ನೋದು ಆಶ್ಚರ್ಯದ ವಿಚಾರ!!