ನ್ಯೂಸ್ ನಾಟೌಟ್: ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಮಹಾಕುಂಭಮೇಳ ಇಡೀ ವಿಶ್ವದ ಗಮನ ಸೆಳೆಯಿತು. ಇದೀಗ ನಾಳೆ ಸಂಪನ್ನವಾಗಲಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಈವರೆಗೂ ಸರಿ ಸುಮಾರು 64 ಕೋಟಿ ಭಕ್ತರು (Devotees) ಭೇಟಿಯಾಗಿದ್ದು, ತ್ರಿವೇಣಿ ಸಂಗಮದಲ್ಲಿ (Triveni Sangam) ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 13 ರಂದು ಮಹಾಕುಂಭಮೇಳ ಪ್ರಾರಂಭವಾದಾಗಿನಿಂದಲೂ ಈವರೆಗೂ ಪ್ರಯಾಗ್ರಾಜ್ ಜನಜಂಗುಳಿಯಿಂದ ತುಂಬಿ ತುಳುಕಾಡುತ್ತಿದೆ.ನಾಳೆ ಶಿವರಾತ್ರಿ (Shivratri) ಕೊನೆಯ ದಿನವಾಗಿರುವುದರಿಂದ 1 ಕೋಟಿಗೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ನಾಳೆ ಮಹಾಶಿವರಾತ್ರಿ, 2025 ರ ಮಹಾ ಕುಂಭಮೇಳದ ಕೊನೆಯ ಅಮೃತ ಸ್ನಾನದಲ್ಲಿ 1 ಕೋಟಿಗಿಂತ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಕುಂಭಮೇಳದ ಕೊನೆಯ ದಿನದಂದು ಬರುವ ಭಕ್ತರ ದೊಡ್ಡ ಸಂಖ್ಯೆಯನ್ನು ನಿಭಾಯಿಸಲು ಉತ್ತರ ಪ್ರದೇಶ ಸರ್ಕಾರ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದೆ.
ಕೊನೆಯ ‘ಅಮೃತ ಸ್ನಾನ’
ಜನವರಿ 13 ರಂದು ಕುಂಭಮೇಳ ಆರಂಭವಾದಾಗಿನಿಂದ ಈವರೆಗೂ ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಸುಮಾರು 64 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇಲ್ಲಿಯವರೆಗೆ ಜನವರಿ 13, 14, 29, ಫೆಬ್ರವರಿ 3 ಮತ್ತು 12 ರಂದು ಒಟ್ಟು ಐದು ಅಮೃತ ಸ್ನಾನಗಳು ನಡೆದಿವೆ. ನಾಳೆ ಕೊನೆಯ ಅಮೃತ ಸ್ನಾನ. ಇತಿಹಾಸದಲ್ಲೇ ಅತಿ ದೊಡ್ಡ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ಭಕ್ತರು ಹರಿದು ಬರುತ್ತಿದ್ದಾರೆ. ರೈಲುಗಳು, ವಿಮಾನಗಳು ಮತ್ತು ರಸ್ತೆಗಳು ತುಂಬಿ ತುಳುಕುತ್ತಿವೆ.
ಕೋಟಿ ಕೋಟಿ ಭಕ್ತರ ಪುಣ್ಯಸ್ನಾನ
ಕುಂಭಮೇಳದ ಆರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕಾರ್ಯಕ್ರಮಕ್ಕೆ 45 ಕೋಟಿಗಿಂತ ಹೆಚ್ಚು ಭಕ್ತರು ಆಗಮಿಸುತ್ತಾರೆ ಎಂದು ಅಂದಾಜಿಸಿದ್ದರು. ಆದರೆ ಫೆಬ್ರವರಿ 11 ರ ವೇಳೆಗೆ ಈ ಗುರಿ ತಲುಪಿತ್ತು. ಮುಂದಿನ ಮೂರು ದಿನಗಳಲ್ಲಿ ಈ ಸಂಖ್ಯೆ 50 ಕೋಟಿಯನ್ನು ದಾಟಿತು.