ಕರಾವಳಿ

ಸಚಿವ ಅಂಗಾರರೇ ಕೂಡಲೇ ಗೋಳಿತೊಟ್ಟು- ಕೊಕ್ಕಡ ರಸ್ತೆ ಸರಿಪಡಿಸಿ, ಜನರ ಜೀವ ಉಳಿಸಿ, ನ್ಯೂಸ್ ನಾಟೌಟ್ ಕಳಕಳಿ

612
Spread the love

ಗೋಳಿತೊಟ್ಟು: ಒಂದು ಕಡೆ ಕೊಕ್ಕಡ ಜಿಲ್ಲಾಸ್ಪತ್ರೆಯನ್ನೇ ನಂಬಿರುವ ಊರಿನ ಸಾವಿರಾರು ಜನ. ಮತ್ತೊಂದು ಕಡೆ ಇತಿಹಾಸ ಪ್ರಸಿದ್ಧ ಸೌತಡ್ಕ, ಧರ್ಮಸ್ಥಳ ದೇವಸ್ಥಾನಕ್ಕೆ ತೆರಳುವ ಪ್ರವಾಸಿಗರು. ಶಾರ್ಟ್ ಕಟ್‌ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳ ಸಂಚಾರ. ಊರಿನವರಿಗೂ ಪ್ರವಾಸಿಗರಿಗೂ ಈ ರಸ್ತೆ ಬೇಕೇ ಬೇಕು. ಆದರೆ ಸರಕಾರಕ್ಕೆ ಮಾತ್ರ ಬೇಡ..!

ಹೌದು, ಊರ- ಪರವೂರ ಜನರಿಗೆ ನೆರವಾಗುವ ಗೋಳಿತೊಟ್ಟು- ಕೊಕ್ಕಡ ರಸ್ತೆ ಕಳೆದ 5 ವರ್ಷದಿಂದ ಶಿಥಿಲಗೊಂಡಿದ್ದು ಜನಪ್ರತಿನಿಧಿಗಳು ಅಸಹಾಯಕರಾಗಿ ಕುಳಿತಿದ್ದಾರೆ. ಸರಿಪಡಿಸುತ್ತೇವೆ ಅನ್ನುವ ಭರವಸೆಯನ್ನು ಕಳೆದ ಹಲವು ವರ್ಷಗಳಿಂದ ನೀಡಲಾಗಿದೆಯಾದರೂ ಇದುವರೆಗೂ ಸರಿ ಪಡಿಸಲಾಗಿಲ್ಲ. ರಾಜಕೀಯ ಇಚ್ಛಾಶಕ್ತಿ ಹಾಗೂ ಸಮನ್ವಯದ ಕೊರತೆ ಇಲ್ಲಿ ಎದ್ದು ಕಾಣುತ್ತಿದ್ದು ಓಟು ಹಾಕಿದ ಜನರು ಮಾತ್ರ ಹಿಡಿ ಶಾಪ ಹಾಕುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ರಿಂದ ಗೋಳಿತೊಟ್ಟು ಮೂಲಕವಾಗಿ ಕೊಕ್ಕಡ, ಧರ್ಮಸ್ಥಳ, ಸೌತಡ್ಕ, ಪಟ್ರಮೆ, ನಿಡ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡಲೇ ಸರಿಪಡಿಸಬೇಕೆಂದು ಐದಾರು ಗ್ರಾಮಗಳ ಜನರು ಒತ್ತಾಯಿಸಿದ್ದಾರೆ.

ಸಚಿವರೇ ಅಮಾಯಕರ ಜೀವ ಉಳಿಸಿ..!

ಕೊಕ್ಕಡ -ಗೋಳಿತೊಟ್ಟು ನಡುವಿನ ವಾಹನ ಪ್ರಯಾಣವೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಯಿದೆ. ಸ್ವತಃ ಸ್ಥಳೀಯ ಜನರೇ ಇದನ್ನು ಹೇಳುತ್ತಾರೆ. ಈ ಬಗ್ಗೆ ನ್ಯೂಸ್ ನಾಟೌಟ್ ಜತೆಗೆ ಮಾತನಾಡಿರುವ ಸ್ಥಳೀಯರಾದ ಚಂದ್ರಶೇಖರ ಶೆಟ್ಟಿ ಪೆರಣ ಅನ್ನುವವರು ಪ್ರತಿಕ್ರಿಯಿಸಿದ್ದು ಹೀಗೆ, ಈ ದಾರಿಯಲ್ಲಿ ಮಳೆಗಾಲದಲ್ಲಿ ವಾಹನ ಸಂಚಾರ ಮಾಡಿಕೊಂಡು ಹೋಗುವುದು ಸುಲಭವಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವ ಉಳಿಯುವುದಿಲ್ಲ. ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಕೆಸರು ನೀರಿನಿಂದ ರಸ್ತೆ ಯಾವುದು ಅನ್ನುವುದೇ ಗೊತ್ತಾಗುವುದಿಲ್ಲ. ಕಳೆದ ಐದು ವರ್ಷದಿಂದ ಇದೇ ರೀತಿಯ ಸಮಸ್ಯೆಯಿದೆ. ಎಸ್. ಅಂಗಾರ ಅವರು ಸಚಿವರಾದ ಮೇಲೆ ಗೋಳಿತೊಟ್ಟಿನಿಂದ ಉಪ್ಪಾರ ಹಳ್ಳದವರೆಗಿನ ರಸ್ತೆಯನ್ನು ಸರಿಪಡಿಸಿಕೊಡುತ್ತಾರೆ ಅನ್ನುವ ನಂಬಿಕೆ ನಮ್ಮದಾಗಿತ್ತು. ಆದರೆ ಅವರು ಇದುವರೆಗೆ ಇತ್ತ ಗಮನ ಹರಿಸಿಲ್ಲ. ನಮ್ಮ ಸಂಕಟವನ್ನು ಶಾಸಕರು ಕೇಳಿಯೇ ಇಲ್ಲ. ಒಂದು ಸಲ ಅವರು ಈ ರಸ್ತೆಯಲ್ಲಿ ಕಾರಿನಲ್ಲಿ ಹೋಗಿಬರಬೇಕು. ನಮ್ಮ ಜನ ಒಂದು ಆಸ್ಪತ್ರೆಗೆ ಹೋಗುವುದಕ್ಕೆ ಎಷ್ಟು ಕಷ್ಟಪಡುತ್ತಿದ್ದಾರೆ ಅನ್ನುವುದನ್ನು ತಿಳಿಯಬೇಕು ಅನ್ನುವುದು ನಮ್ಮ ಅಪೇಕ್ಷೆ. ಗರ್ಭಿಣಿಯರು, ವೃದ್ಧರು, ಅನಾರೋಗ್ಯ, ಎಂಡೋ ಸಲ್ಪನ್ ಪೀಡಿತರು ಈ ರಸ್ತೆಯಲ್ಲಿ ವಾಹನದ ಒಳಗೆ ಕುಳಿತರೂ ಅವರ ಜೀವಕ್ಕೇ ಅಪಾಯವಿದೆ ಅನ್ನುವುದು ವಾಸ್ತವ ಎಂದು ತಿಳಿಸಿದರು.

ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರು ಹೇಳುವುದೇನು?

ರಸ್ತೆ ಸಮಸ್ಯೆಯ ಬಗ್ಗೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ ಪ್ರತಿಕ್ರಿಯಿಸಿದ್ದು ಹೀಗೆ, ಗೋಳಿತೊಟ್ಟಿನಿಂದ ಉಪ್ಪಾರ ಹಳ್ಳದ ವರೆಗಿನ ಕಾರ್ಯ ಕ್ಷೇತ್ರವು ಸುಳ್ಯ ಶಾಸಕ ಹಾಲಿ ಸಚಿವರಾದ ಎಸ್.ಅಂಗಾರ ವ್ಯಾಪ್ತಿಗೆ ಬರುತ್ತದೆ. ಉಪ್ಪಾರ ಹಳ್ಳದಿಂದ ಕೊಕ್ಕಡವರೆಗಿನ ರಸ್ತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವ್ಯಾಪ್ತಿಗೆ ಬರುತ್ತದೆ. ಶಾಸಕ ಪೂಂಜಾ ವ್ಯಾಪ್ತಿಯಲ್ಲಿರುವ ರಸ್ತೆಗೆ ಈಗಾಗಲೇ ಹಣ ಬಿಡುಗಡೆ ಆಗಿದ್ದು ಪ್ಯಾಚ್ ವರ್ಕ್ ಕೆಲಸ ಎರಡು ಬಾರಿ ಆಗಿದೆ. ಕಾರಣಾಂತರಿಂದ ಮರು ಢಾಮರೀಕರಣ ಮಾಡಲು ಸಾಧ್ಯವಾಗಿಲ್ಲ. ಮಳೆಗಾಲ ಮುಗಿದ ಕೂಡಲೇ ಮರು ಢಾಮರೀಕರಣ ಮಾಡಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ. ನಮ್ಮ ಭಾಗದ ರಸ್ತೆ ಸಂಪೂರ್ಣವಾಗಿ ಸರಿ ಆಗಬೇಕೆಂದು ನಾನು ಬಯಸುತ್ತೇನೆ. ಈ ನಿಟ್ಟಿನಲ್ಲಿ ಸಚಿವರು ಕ್ಷಿಪ್ರವಾಗಿ ಸ್ಪಂದಿಸಲಿದ್ದಾರೆ ಅನ್ನುವ ಭರವಸೆ ನಮ್ಮದು ಎಂದು ತಿಳಿಸಿದರು.

See also  ಕಡಬ: ತೆಪ್ಪ ಮಗುಚಿ ಮಹಿಳೆ ಮೃತ್ಯು,ಹುಲ್ಲು ಸಂಗ್ರಹಿಸಿ ಹೊಳೆ ದಾಟುತ್ತಿದ್ದಾಗ ದುರಂತ

ಊರಿನವರೇ ಹಣ ಹಾಕಿ ರಸ್ತೆ ಸರಿ ಮಾಡಿದ್ರು

ಜನ ಪ್ರತಿನಿಧಿಗಳು ಇದನ್ನು ಸರಿಪಡಿಸಲು ಮುಂದೆ ಬಾರದಿರುವ ಹಿನ್ನೆಲೆಯಲ್ಲಿ ಇಲ್ಲಿನ ಶ್ರದ್ಧಾ ಗೆಳೆಯರ ಬಳಗ ಉಪ್ಪಾರಪಳಿಕೆ ತಂಡ ಕಳೆದ ಮೂರು ವರ್ಷ ರಸ್ತೆಯನ್ನು ಮಣ್ಣು ಹಾಕಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ಸ್ಥಳೀಯ ದಾನಿಗಳಿಂದ ಒಟ್ಟು 50,000 ಸಾವಿರ ರೂ. ಸಂಗ್ರಹಿಸಿ ಕೆಲಸ ಮಾಡಿದ್ದಾರೆ.

ಕಾಂಕ್ರಿಟ್ ರಸ್ತೆ ನಿರ್ಮಿಸಲು ಒತ್ತಾಯ

ಗೋಳಿತೊಟ್ಟು- ಕೊಕ್ಕಡ ರಸ್ತೆ ರಕ್ಷಿತಾರಣ್ಯದ ಒಳಗೆ ಸಾಗುವ ರಸ್ತೆಯಾಗಿದೆ. ಮಳೆಗಾಲದಲ್ಲಿ ಮರಗಳಿಂದ ರಸ್ತೆಗೆ ಬೀಳುವ ಮಳೆ ಹನಿಯಿಂದ ಢಾಮರು ಪೂರ್ಣವಾಗಿ ಹಾಳಾಗುತ್ತಿದೆ. ಹಾಗಾಗಿ ಕಾಂಕ್ರಿಟ್ ರಸ್ತೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರ ಆಗ್ರಹಿಸಿದ್ದಾರೆ.

  Ad Widget   Ad Widget   Ad Widget   Ad Widget   Ad Widget   Ad Widget