ನ್ಯೂಸ್ ನಾಟೌಟ್: ಯೋಗಾಸನದ ಮೂರು ಪ್ರಕಾರಗಳಲ್ಲಿ ವಿಶಿಷ್ಟ ಸಾಧನೆಯೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿದ್ಯಾರ್ಥಿನಿಯೋರ್ವಳು ಅಪೂರ್ವ ಸಾಧನೆಗೈದಿದ್ದಾಳೆ.ಈಕೆ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಒಳಪಟ್ಟ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ. ಹೆಸರು ಬಿ.ಕೆ.ಸಿಂಚನ. ಈ ಮೂಲಕ ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಂತೆ ಮಾಡಿದ್ದಾಳೆ.
ಮಧ್ಯಪ್ರದೇಶದ ಇಂದೋರ್ ನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷಿಯಾ ವಿಭಾಗದ ಮುಖ್ಯಸ್ಥರು ಹಾಗೂ ತೀರ್ಪುಗಾರರಾಗಿ ಪಾಲ್ಗೊಂಡಿದ್ದ ಡಾ.ಮನೀಶ್ ಬಿಷ್ಣೋಯ್ ಅವರ ಸಮ್ಮುಖದಲ್ಲಿ ಶಾಲೆಯ ಆವರಣದಲ್ಲಿ ಸಿಂಚನ ಯೋಗಾಸನಗಳನ್ನು ಪ್ರದರ್ಶಿಸಿ ವಿಶ್ವ ದಾಖಲೆ ಬರೆದಿದ್ದು ಹೆಮ್ಮೆಯ ಸಂಗತಿ. ಈ ಸಂದರ್ಭ ಡಾ.ಮನೀಶ್ ಬಿಷ್ಣೋಯ್ ಅವರು, ‘ಡಿಂಪಾಸನ’ದಲ್ಲಿ 14 ಮೀಟರ್‌ನ್ನು ಕ್ರಮಿಸುವ ಮೂಲಕ ಸಿಂಚನ ತನ್ನ ಹೆಸರಿನಲ್ಲೇ ಇದ್ದ 10 ಮೀಟರ್ ದಾಖಲೆಯನ್ನು ಮುರಿದು ವಿಶ್ವದಾಖಲೆ ಮಾಡಿದ್ದಾಳೆ. ‘ಉರಭ್ರಾಸನ’ದಲ್ಲಿ 1.04 ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಹಾಗೂ ‘ಮೃಗ ಮುಖಾಸನ’ದಲ್ಲಿ 1.45 ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಈಕೆ ವಿಶ್ವದಾಖಲೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದಾಗಿ ಘೋಷಿಸಿದರು.
ಒಂದೇ ಬಾರಿಗೆ ಮೂರು ‘ವಿಶ್ವ ದಾಖಲೆ’
ಯುಎಸ್ ಮುಖ್ಯ ನೆಲೆಯನ್ನಾಗಿ ಹೊಂದಿರುವ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ವಿಶ್ವದ ಅಪರೂಪದ ವಿದ್ಯಮಾನಗಳನ್ನು ದಾಖಲಿಸಿಕೊಂಡು ಬರುತ್ತಿದೆ. 11 ವರ್ಷದ ಬಾಲಕಿ ಒಂದೇ ಬಾರಿಗೆ ಮೂರು ವಿಶ್ವ ದಾಖಲೆ ಮಾಡಿರುವುದು ಅಪರೂಪದಲ್ಲಿ ಅಪರೂಪದ ವಿದ್ಯಮಾನವೆಂದು ಡಾ.ಮನೀಶ್ ಬಿಷ್ಣೋಯ್ ಅಭಿಪ್ರಾಯಪಟ್ಟರು.