ನ್ಯೂಸ್ ನಾಟೌಟ್: ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಹೆಸರಲ್ಲಿ ಕುಟುಂಬವೊಂದು ಸುಳ್ಳು ಮಾಹಿತಿ ಕೊಟ್ಟು ಪರಿಹಾರ ಪಡೆದುಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯನ್ನು ರೈತ ಮಹಿಳೆ ಎಂದು ಬಿಂಬಿಸಿ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ ರೈತ ಆತ್ಮಹತ್ಯೆ ಅಡಿ 5ಲಕ್ಷ ರೂ. ಪರಿಹಾರ ಪಡೆದಿದ್ದಾರೆ.
ಆದರೆ ಇದೀಗ ಆಕೆ ಸಾವಿಗೂ ಮುನ್ನ ಮಾಡಿದ ವಿಡಿಯೋ ವೈರಲ್ ಆಗಿದ್ದು, ಕುಟುಂಬದ ಪ್ಲಾನ್ ಬಯಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದಂಡ ಸೊಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ತಪ್ಪಾಗಿ ಮಾಹಿತಿ ನೀಡಿ ರೈತ ಆತ್ಮಹತ್ಯೆ ಅಡಿ ಪರಿಹಾರ ಪಡೆದುಕೊಂಡು, ಇದೀಗ ಕುಟುಂಬ ಸಿಕ್ಕಿಬಿದ್ದಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ಯುವತಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಎಂಟು ತಿಂಗಳ ಬಳಿಕ ಸ್ಫೋಟಕ ತಿರುವು ಸಿಕ್ಕಿದೆ. ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಮೋನಾಬಾಯಿಯ ಸಾವನ್ನು ರೈತ ಮಹಿಳೆಯ ಆತ್ಮಹತ್ಯೆ ಎಂದು ತಿರುಚಿ, ಸರ್ಕಾರದಿಂದ ಪರಿಹಾರ ಪಡೆದಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೋನಾಬಾಯಿಯ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕೆಯ ಸಂಬಂಧಿಕರು ಒತ್ತಾಯಿಸಿದ್ದಾರೆ.
ಮೋನಾಬಾಯಿ, ತನ್ನ ಅಣ್ಣ ಮತ್ತು ಅತ್ತಿಗೆಯ ಕಿರುಕುಳದಿಂದಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದು ಗೊತ್ತಾಗಿದೆ. ಆಕೆಯ ಮದುವೆಗೆ ಹಣವಿಲ್ಲದಿರುವ ಕಾರಣಕ್ಕೆ ಅಣ್ಣ ಮತ್ತು ಅತ್ತಿಗೆಯಿಂದ ನಿರಂತರ ಕಿರುಕುಳಕ್ಕೊಳಗಾಗಿದ್ದಳು ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ಮೋನಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೆ ಮೊದಲು ಮೋನಾಬಾಯಿ ತನ್ನ ಸಾವಿಗೆ ಅಣ್ಣ ಮತ್ತು ಅತ್ತಿಗೆ ಕಾರಣ ಎಂದು ಸೆಲ್ಫಿ ವಿಡಿಯೋದಲ್ಲಿ ದಾಖಲಿಸಿದ್ದಳು. ಆದರೆ ಕುಟುಂಬ ಅದನ್ನು ರೈತ ಮಹಿಳೆ ಆತ್ಮಹತ್ಯೆ ಎಂದು ತಿರುಚಿ ಪರಿಹಾರ ಪಡೆದಿತ್ತು ಎನ್ನಲಾಗಿದೆ.
ಯುದ್ಧ ಪೀಡಿತ ಇರಾನ್ ನಿಂದ 110 ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್, ತಡರಾತ್ರಿ ದೆಹಲಿಗೆ ಬಂದಿಳಿದ ವಿಮಾನ