ಸುಬ್ರಹ್ಮಣ್ಯ: ಬೈಕಿನ ಮೇಲೆ ಕಡವೆ ಹಾರಿದ ಪರಿಣಾಮವಾಗಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಕಛೇರಿ ಸಿಬ್ಬಂದಿ ರಾಮಚಂದ್ರ ಅರ್ಬಿತ್ತಾಯರು ಸ್ಥಳಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಏನಿದು ಘಟನೆ?
ಇಂದು ಮುಂಜಾನೆ ಸುಮಾರು 5.45ರ ಹೊತ್ತಿಗೆ ರಾಮಚಂದ್ರ ಅರ್ಬಿತ್ತಾಯರು ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದಕ್ಕೆ ಶಟಲ್ ಬ್ಯಾಡ್ಮಿಂಟನ್ ಆಟ ಆಡಲು ತೆರಳುತ್ತಿರುವ ಸಂದರ್ಭ ಕುಲ್ಕುಂದದ ಬ್ರಾಮರಿ ನೆಸ್ಟ್ ವಸತಿ ಗೃಹದ ಬಳಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಪಕ್ಕದ ಗುಡ್ಡ ದಿಂದ ಕಡವೆ ಹಾರಿತು. ಪರಿಣಾಮವಾಗಿ ಅರ್ಬಿತ್ತಾಯರ ಕುತ್ತಿಗೆಯ ಭಾಗಕ್ಕೆ ಬಲವಾದ ಏಟು ಬಿದ್ದು ಬೈಕ್ ಪಲ್ಟಿಯಾಯಿತು. ರಾಮಚಂದ್ರರು ಸ್ಥಳದಲ್ಲೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ರಾಮಚಂದ್ರ ಅರ್ಬಿತ್ತಾಯರು ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕಚೇರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಸುಮಾರು 53 ವರ್ಷ ಪ್ರಾಯವಾಗಿರುವ ಇವರು ಅವಿವಾಹಿತರಾಗಿದ್ದಾರೆ. ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಶಾಲಾ ಗುಮಾಸ್ತರಾಗಿದ್ದರೂ ಪ್ರವೃತ್ತಿಯಲ್ಲಿ ಕೀ ಬೋರ್ಡ್ ವಾದಕರಾಗಿ, ಭಾಗವತರಾಗಿಯೂ ಹೆಸರು ಪಡೆದಿದ್ದರು.