ಬೆಂಗಳೂರು : ರಾಜ್ಯ ಬಿಜೆಪಿಯ ವಿದ್ಯಮಾನ ಈಗ ಸಂಕ್ರಮಣ ಕಾಲದಲ್ಲಿದೆ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾಯಿಸಲಾಗುತ್ತದೆ. ಬೇರೊಬ್ಬರಿಗೆ ಅವಕಾಶ ನೀಡಲಾಗುತ್ತದೆ ಎಂಬ ಚರ್ಚೆ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಪಕ್ಷದ ಮೂಲ ಕಾರ್ಯಕರ್ತರು ಬಹು ದಿನಗಳಿಂದ ಬಯಸುತ್ತಿದ್ದ ಆಕಾಂಕ್ಷೆಯೊಂದು ಮಾತ್ರ ಹಾಗೆಯೇ ಉಳಿದಿದೆ. ಬಿಜೆಪಿಯ ಮೂಲ ಸಿದ್ಧಾಂತ ಹಿಂದುತ್ವ. ಹಿಂದುತ್ವದ ಹಿನ್ನೆಲೆಯಿಂದ ಬಂದವರಿಗೆ ನಾಯಕತ್ವ ಸಿಗಬೇಕೆಂಬ ಕಾರ್ಯಕರ್ತರ ಬಯಕೆ ರಾಜ್ಯದಲ್ಲಿ ಇದುವರೆಗೆ ಈಡೇರಲೇ ಇಲ್ಲ.
ಹೀಗಾಗಿ ಈ ಬಾರಿ ಕಾರ್ಯಕರ್ತರ ನಿರೀಕ್ಷೆ ಈಡೇರುವುದೇ ಎಂಬ ಪ್ರತೀಕ್ಷೆ ಮೂಡಿದೆ. ರಾಜ್ಯದಲ್ಲಿ ಹಿಂದುತ್ವದ ಆಧಾರದ ಮೇಲೆ ಶಾಸಕರಾದ, ಸಂಸದರಾದವರು ಇಲ್ಲವೇ ಇಲ್ಲವೆಂದಲ್ಲ. ಆದರೆ ನಾಯಕತ್ವ ಕೊಡಬೇಕು ಎಂಬ ವಿಚಾರ ಬಂದಾಗ ಅವರನ್ನು ಹಿಂದೆ ಸರಿಸಲಾಗಿದೆ. ಉದಾಹರಣೆಗೆ ಅನಂತಕುಮಾರ್ ಹೆಗಡೆ, ಪ್ರಹ್ಲಾದ್ ಜೋಷಿ, ಸಿ.ಟಿ.ರವಿ, ಸುನೀಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್, ಸುರೇಶ್ ಕುಮಾರ್ , ಕಾಗೇರಿ ಇತ್ಯಾದಿ. ಇವರ್ಯಾರು ಶಾಸಕರಾಗಬೇಕೆಂದು ಹೋರಾಟಕ್ಕೆ ಬಂದವರಲ್ಲ. ಹೋರಾಡುತ್ತಾ, ಪ್ರತಿಭಟಿಸುತ್ತಾ, ಪ್ರಕರಣ ಎದುರಿಸುತ್ತಾ ಜನಪ್ರತಿನಿಧಿಗಳಾದರು. ಇದನ್ನು ಹೊರತುಪಡಿಸಿ ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿದ ವ್ಯಕ್ತಿಗಳು ಸಾಕಷ್ಟಿದ್ದಾರೆ. ಅವರಲ್ಲಿ ಕೆಲವರು ಮೂಲ ಬಿಜೆಪಿಯರಾದರೆ, ಕೆಲವರು ಅಧಿಕಾರಕ್ಕಾಗಿಯೇ ಅನ್ಯ ಪಕ್ಷದಿಂದ ಬಂದವರು. ಕೆಲವರು ಪಕ್ಷ ಬಿಟ್ಟು ಮರಳಿ ಬಂದವರು.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಯದುವೀರ್,ಸೋಮಣ್ಣ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಈಗ ಅಧಿಕಾರದ ಮುನ್ನೆಲೆಯಲ್ಲಿ ಇರುವವರು ಬಿಜೆಪಿಯ ಕೋರ್ ಐಡಿಯಲಾಜಿಯ ಉತ್ಪನ್ನವಲ್ಲ. ಹೀಗಾಗಿ ಸಿದ್ಧಾಂತಬದ್ಧ ವ್ಯಕ್ತಿಗಳಿಗೆ ಅಧಿಕಾರ ಸಿಗಬೇಕೆಂಬುದು ಕಾರ್ಯಕರ್ತರ ಸಹಜ ಬಯಕೆ. ಆದರೆ ಅದು ಇದುವರೆಗೂ ಮರೀಚಿಕೆಯಾಗೇ ಉಳಿದಿದ್ದು ಬದಲಾವಣೆಯ ಈ ಹಂತದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ. ಸಿದ್ಧಾಂತ ಹಿನ್ನೆಲೆಯ ವ್ಯಕ್ತಿಗಳು ಅನ್ಯ ರಾಜ್ಯದಲ್ಲಿ ಮುನ್ನೆಲೆಗೆ ಬಂದು ಪಕ್ಷ ಹಾಗೂ ಸರ್ಕಾರವನ್ನು ಸಮರ್ಥವಾಗಿ ಮುನ್ನೆಡೆಸಿದ ಉದಾಹರಣೆ ಬಿಜೆಪಿಯಲ್ಲಿ ಸಾಕಷ್ಟಿಸಿದೆ.
ಉದಾಹರಣೆಗೆ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ , ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಅಷ್ಟೇ ಏಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಇದೇ ಪರಂಪರೆಯಿಂದ ಬಂದವರು. ಹೇಳಿಕೇಳಿ ಇದು ಸಂಘದ ಶತಮಾನೋತ್ಸವ ಸಂದರ್ಭ. ವ್ಯಕ್ತಿತ್ವ ನಿರ್ಮಾಣ, ಸೈದ್ಧಾಂತಿಕ ವಿಸ್ತರಣೆ, ಬಲವರ್ಧನೆ ಈ ಕ್ಷಣದ ಆದ್ಯತೆ ಎಂದು ಸಂಘವೂ ಪ್ರತಿಪಾದಿಸುತ್ತಿದೆ. ಹೀಗಿರುವಾಗ ಬಿಜೆಪಿಯಲ್ಲೂ ಸಿದ್ಧಾಂತ ನಿಷ್ಠರಿಗೆ ಅಧಿಕಾರ ಸಿಗಲಿ, ಆ ಮೂಲಕ ಹಿಂದುತ್ವದ ಬಲವರ್ಧನೆಯ ಮಾತು ಕೇಳಿ ಬರುತ್ತಿದೆ. ಈ ಹಂತದಲ್ಲಿ ವರಿಷ್ಠರ ನಿರ್ಧಾರದತ್ತ ಎಲ್ಲರ ದೃಷ್ಠಿ ನೆಟ್ಟಿದೆ.