ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಚಿಂತನೆ ನಡೆಯುತ್ತಿದ್ದು, ಈ ಕುರಿತು ಸೆಪ್ಟೆಂಬರ್ 5ರಂದು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರವಾಗಿ ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಚರ್ಚೆ ನಡೆಸಲಾಗಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಆರ್.ಅಶೋಕ್ ಅವರು, ಪ್ರತಿ ತಾಲೂಕಿನಲ್ಲಿ ಆಚರಣೆ ಬಗ್ಗೆ ಮಾಹಿತಿ ಪಡೆದು, ಸೆಪ್ಟೆಂಬರ್ 5 ರಂದು ಆ ಬಗ್ಗೆ ಸಭೆ ನಡೆಸಲಾಗುತ್ತದೆ. ಸಭೆ ಬಳಿಕ ಗಣೇಶ ಉತ್ಸವ ಆಚರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.