ಮಡಿಕೇರಿ : ಸರಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಪತ್ರವನ್ನು ಸೃಷ್ಟಿಸಿ ಲಕ್ಷಾಂತರ ರೂ. ಹಣ ದೋಚಿದ ವಂಚಕರ ಜಾಲವನ್ನು ಮಡಿಕೇರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪುತ್ತೂರು ತಾಲೂಕಿನ ಸಾಲ್ಮರ ನಿವಾಸಿ ಪುನಿತ್ ಕುಮಾರ್(32) ಮತ್ತು ಮೈಸೂರಿನ ಗಾಯತ್ರಿಪುರದ ಅರುಣ್ ಕುಮಾರ್ (30) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೈಸೂರಿನ ನಂಜರಾಯಪಟ್ಟಣದ ಕೆ.ಎಂ.ಯಶ್ವಿತಾ ಎಂಬ ಯುವತಿಗೆ ಮಡಿಕೇರಿ ಜಿಲ್ಲಾಧಿಕಾರಿಯ ಸಹಿ ನಕಲಿ ಮಾಡಿದ್ದಲ್ಲದೆ, ಅವರ ಹೆಸರಲ್ಲಿ ಉದ್ಯೋಗ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ನೀಡಿದ್ದರು. ಅಂಚೆಯಲ್ಲಿ ನೇಮಕಾತಿ ಪತ್ರವನ್ನು ನೀಡಿದ್ದಲ್ಲದೆ, ಇದಕ್ಕಾಗಿ 1.50 ಲಕ್ಷ ರೂಪಾಯಿ ಹಣ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಯಶ್ವಿತಾ ಜಿಲ್ಲಾಧಿಕಾರಿಗಳ ಬಳಿ ಮಾಹಿತಿ ಕೇಳಿದಾಗ, ಆರೋಪಿಗಳ ನಿಜ ರೂಪ ಬಯಲಾಯಿತು. ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳು ಸಾರ್ವಜನಿಕ ಪ್ರಕಟಣೆಯನ್ನೂ ಹೊರಡಿಸಿ ಎಚ್ಚರಿಕೆ ರವಾನಿಸಿದ್ದರು. ಅಲ್ಲದೆ, ಜಿಲ್ಲಾಧಿಕಾರಿಯ ಸೂಚನೆಯಂತೆ ಶಿರಸ್ತೇದಾರ್ ಪ್ರಕಾಶ್, ಮಡಿಕೇರಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ತನಿಖೆ ನಡೆಸಿ ಪ್ರಕರಣ ಸಂಬಂಧಿಸಿ ಚಂದ್ರಶೇಖರ್, ರಾಜಮಣಿ ಯಾನೆ ಲೋಕೇಶ್ ಮತ್ತು ಗಣಪತಿ ಯಾನೆ ಶಬರೀಶ ಎಂಬವರನ್ನು ಬಂಧಿಸಿದ್ದರು. ವಂಚಕರ ಜಾಲದ ಪ್ರಮುಖ ರೂವಾರಿ ಪುನೀತ್ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಪುತ್ತೂರಿನ ಕೆಮ್ಮಿಂಜೆಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.