ಭಕ್ತಿಭಾವ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಜಿಪಿ ಪ್ರವೀಣ್ ಸೂದ್ ಭೇಟಿ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಭರವಸೆ

ಸುಳ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಆಶ್ಲೇಷ ಬಲಿ, ಅಭಿಷೇಕ ಸೇವೆ ನೆರವೇರಿಸಿ ಮಹಾಪೂಜೆಯಲ್ಲಿ ಪಾಲ್ಗೊಂಡರು. ನಾಗಪ್ರತಿಷ್ಠೆ ಸೇವೆ ನೆರವೇರಿಸಿದರು. ಶ್ರೀ ದೇವರ ದರುಶನ ಪಡೆದು, ಶ್ರೀ ಹೊಸಳಿಗಮ್ಮನ ದರುಶನ ಪಡೆದು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಪ್ರವೀಣ್ ಸೂದ್ ಪತ್ನಿ, ಮಗಳು, ಅಳಿಯ ಕ್ರಿಕೆಟ್‌ ಆಟಗಾರ ಮಾಯಾಂಕ್ ಅಗರ್ವಾಲ್ ಜತೆಯಲ್ಲಿದ್ದರು. ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಉಪಸ್ಥಿತರಿದ್ದರು.

ಈ ವೇಳೆ ಮಾಧ್ಯಮವೊಂದಿಗೆ ಮಾತನಾಡಿದ ಸೂದ್, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕಳೆದ ಎರಡು ವರ್ಷದಲ್ಲಿ ವಿಶೇಷ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಳೆದ ಹತ್ತು ವರ್ಷದಲ್ಲಿ ಇಂತಹ ಕ್ರಮಕೈಗೊಂಡಿಲ್ಲ. ಮಂಗಳೂರು, ಬೆಂಗಳೂರು, ಉಡುಪಿ ಸೇರಿದಂತೆ ಪ್ರಮುಖ ನಗರಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಡ್ರಗ್ಸ್ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ತಿಳಿಸಿದರು.

ಸುಬ್ರಹ್ಮಣ್ಯ ಠಾಣೆ ಅಭಿವೃದ್ಧಿಗೆ ಪ್ರಯತ್ನ

ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಎಸ್‌ ಪಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇವತ್ತು ಕ್ಷೇತ್ರಕ್ಕೆ ಆಗಮಿಸಿದ ವೇಳೆಯೂ ದೇವಳದ ಆಡಳಿತದವರು ಸೇರಿ ಹಲವರು ನನ್ನ ಗಮನಕ್ಕೆ ತಂದಿದ್ದಾರೆ. ದಾರಿಯಲ್ಲಿ ಹೋಗುವಾಗ ಪೊಲೀಸ್ ಠಾಣೆಯನ್ನು ಗಮನಿಸಿದ್ದೇನೆ, ಚಿಕ್ಕದಾಗಿದ್ದು, ಹಳೆಯದಾಗಿರುವುದು ಗಮನಕ್ಕೆ ಬಂದಿದೆ. ಸದ್ಯದಲ್ಲೇ ಸರಕಾರದ ವತಿಯಿಂದ ಹೊಸ ಕಟ್ಟಡ ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದರು.

Related posts

ಇಂದು ಮಂಗಳೂರಿನಲ್ಲೇ ಉಳಿದು ಕೊಳ್ಳಲಿರುವ ಸಿ.ಎಂ., ನಾಳೆ ಕೊಲ್ಲೂರಿನ ಮೂಕಾಂಬಿಕಾ ದೇಗುಲಕ್ಕೆ ಭೇಟಿ

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಕೊಡಿಮರ ಮೆರವಣಿಗೆ

ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿ ಅಂಗವಾಗಿ ಬಲೀಂದ್ರ ಪೂಜೆ