ಸಂಪಾಜೆ: ಹಿರಿಯ ಸಾಹಿತಿ, ಸಿನಿಮಾ ನಿರ್ಮಾಪಕ ಎನ್ ಎಸ್ ದೇವಿ ಪ್ರಸಾದ್ ಸಂಪಾಜೆ ಇಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಇಂದಿರಾ, ಮಗಳು ಸಹನಾ, ಪ್ರಜ್ಞಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಎನ್ ಎಸ್ ದೇವಿ ಪ್ರಸಾದ್ 27-4-1942 ರಂದು ಸಂಪಾಜೆಯಲ್ಲಿ ಜನಿಸಿದರು. ತಂದೆ ದಿವಂಗತ ಸಣ್ಣಯ್ಯ ಪಟೇಲ್ ಹಾಗೂ ಪೂವಮ್ಮ ದಂಪತಿಯ ಏಕೈಕ ಪುತ್ರರಾಗಿದ್ದಾರೆ. ಎನ್ ಎಸ್ ದೇವಿ ಪ್ರಸಾದ್ ಹುಟ್ಟು ಹೋರಾಟಗಾರ, ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಅನ್ನುವುದನ್ನು ವಿರೋಧ ಮಾಡಿ ಹಲವು ಹೋರಾಟ ನಡೆಸಿದ್ದರು. ಅಮರ ಸುಳ್ಯದ ಸ್ವಾತಂತ್ರ್ಯ ಸಂಗ್ರಾಮದ ಪುಸ್ತಕ ಬರೆದು ಇತಿಹಾಸದ ಪುಟ ಸೇರುತ್ತಿದ್ದ ಅದೆಷ್ಟೋ ಮಾಹಿತಿಗಳನ್ನು ಕಲೆ ಹಾಕಿದ್ದರು. ಕರ್ನಾಟಕ ಅರೆಭಾಷೆ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಂಪಾಜೆ ಜೂನಿಯರ್ ಕಾಲೇಜಿನ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು. ಅವರು ನಿರ್ಮಿಸಿದ ‘ಮೂರು ದಾರಿಗಳು’ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ಒಲಿದು ಬಂದಿದ್ದವು. ‘ಶಿರಾಡಿ ಭೂತ’ ನಾಟಕಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದರು. ಇತ್ತೀಚೆಗಷ್ಟೇ ಅರೆಭಾಷೆ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪಡೆದುಕೊಂಡಿದ್ದರು.