ಬೆಂಗಳೂರು: ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಆರಂಭವಾಗಿದ್ದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.ಕೊಲೆಯಾದ ಯುವಕ ಸುನೀಲ್ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶ ಮೂಲದ ಯುವಕರಿಬ್ಬರೂ ನಗರದ ಗ್ರಾನೈಟ್ ಕೆಲಸ ಮಾಡುತ್ತಿದ್ದು, ರಾಜಾಜಿನಗರದಲ್ಲಿ ವಾಸವಾಗಿದ್ದರು. ಒಂದೇ ರೂಮಿನಲ್ಲಿದ್ದ ಯುವಕರು ಸೋಮವಾರ ರಾತ್ರಿ ಮದ್ಯ ಸೇವಿಸಿದ್ದರು. ಒಂದೇ ಸ್ವಿಚ್ ಇದ್ದು, ಈ ವೇಳೆ ಚಾರ್ಜ್ ಹಾಕುವ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದೆ. ಜಗಳ ತಾರಕ್ಕಕ್ಕೇರಿದ್ದು, ಇಬ್ಬರ ನಡುವೆ ತಳ್ಳಾಟ ನಡೆದ ಪರಿಣಾಮ ಪಕ್ಕದಲ್ಲಿದ್ದ ಸೌದೆಯಿಂದ ಆರೋಪಿ ಮೃತನ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ತಲೆಗೆ ಬಿದ್ದ ಏಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಸುನೀಲ್ ನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಚಾರಣೆ ಮುಂದುವರಿದಿದೆ.