ಕ್ರೀಡೆ/ಸಿನಿಮಾ

ಚೆನ್ನಾಗಿ ನಟನೆ ಮಾಡ್ತಿದ್ದೀರಾ ಮುಂದುವರೆಸಿ …

ಬರಹ: ಪತ್ರಕರ್ತ ಚೇತನ್‌ ನಾಡಿಗೇರ್, ಫೇಸ್‌ ಬುಕ್‌ ಪುಟದಿಂದ

ಬೆಂಗಳೂರು: ಆಗಸ್ಟ್​ 02, ಅಮಿತಾಭ್​ ಬಚ್ಚನ್​ ಅವರ ಪಾಲಿಗೆ ಬಹಳ ಮಹತ್ವದ ದಿನ. ಅಮಿತಾಭ್​ ಬಚ್ಚನ್​ ಹುಟ್ಟಿದ್ದು ಅಕ್ಟೋಬರ್​ 11ರಂದಾದರೂ, ಅವರು ಮರುಹುಟ್ಟು ಪಡೆದಿದ್ದು ಆಗಸ್ಟ್​ 02ರಂದು. ‘ಕೂಲಿ’ ಚಿತ್ರದ ಚಿತ್ರೀಕರಣದಲ್ಲಿ ಭೀಕರವಾಗಿ ಪೆಟ್ಟುತಿಂದು, ಕೋಮಾಗೆ ಜಾರಿದ್ದ ಅಮಿತಾಭ್​ ಬಚ್ಚನ್​ ಅವರಿಗೆ ಪ್ರಜ್ಞೆ ಬಂದಿದ್ದು 1982ರ ಇದೇ ದಿನದಂದು. ಹಾಗಾಗಿ, ಅಮಿತಾಭ್​ ಬಚ್ಚನ್​ ಅಭಿಮಾನಿಗಳು ಈ ದಿನವನ್ನು ಅವರ ಮರುಹುಟ್ಟುಹಬ್ಬವೆಂದು ಪರಿಗಣಿಸುತ್ತಾರೆ.

‘ಕೂಲಿ’ ಚಿತ್ರದ ಫೈಟಿಂಗ್​ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ಅಮಿತಾಭ್​ ಬಚ್ಚನ್​ ಪೆಟ್ಟುತಿಂದಿದ್ದು, ಆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್​ ಮಾಡಿದ್ದು, ಆರು ದಿನಗಳ ಕಾಲ ಕೋಮದಲ್ಲಿದ್ದ ಅವರು ಕ್ರಮೇಣ ಚೇತರಿಸಿಕೊಂಡಿದ್ದು, ಈ ಅಪಘಾತಕ್ಕೆ ಕಾರಣ ನಟ ಪುನೀತ್​ ಇಸ್ಸಾರ್ ಎಂದು ಹಲವರು ಅವರಿಗೆ ಬಹಿಷ್ಕಾರ ಹಾಕಿದ್ದು, ಆರು ತಿಂಗಳ ನಂತರ ಪುನಃ ಅಮಿತಾಭ್​ ಬಚ್ಚನ್​ ಬಣ್ಣ ಹಚ್ಚಿದ್ದು  … ಇದೆಲ್ಲದರ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿದೆ. ಆದರೆ, ಅಪಘಾತದ ದಿನದಂದು ಸರಿಯಾಗಿ ಏನಾಯಿತು ಎಂದು ಹೆಚ್ಚು ಸುದ್ದಿಯಾಗಿಲ್ಲ. ಚಿತ್ರೀಕರಣ ವೇಳೆ ಅಮಿತಾಭ್​ ಧಾರುಣವಾಗಿ ಪೆಟ್ಟು ತಿಂದರು, ನೋವಿನಿಂದ ಚೀರಾಡಿದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು, ಅಷ್ಟರಲ್ಲಿ ಅವರು ಕೋಮಾಗೆ ಜಾರಿದರು ಅಂತೆಲ್ಲ ಅಂದುಕೊಂಡರೆ ಅದು ತಪ್ಪು. ಸ್ವತಃ ಅಮಿತಾಭ್​ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ, ಹೊಡೆದಾಟದ ದೃಶ್ಯದಲ್ಲಿ ಕಿಬ್ಬೊಟ್ಟೆಗೆ ಪೆಟ್ಟು ಬಿದ್ದಾಗ, ನೋವಾಯಿತಾದರೂ ಅವರು ಕುಸಿದು ಬೀಳಲಿಲ್ಲವಂತೆ. ಶಾಟ್​ ಓಕೆ ಆಗುತ್ತಿದ್ದಂತೆಯೇ, ಅವರು ಹೊರಗೆ ಹೋಗಿ, ಲಾನ್​ ಮೇಲೆ ಕಾಲು ಚಾಚು ಮಲಗಿದರಂತೆ. ನೋವೇನೋ ಇತ್ತಂತೆ, ಆದರೆ ಅದು ಇನ್ನೊಂದು ಮಟ್ಟಕ್ಕೆ ಹೋಗಬಹುದು ಎಂಬ ಪರಿಕಲ್ಪನೆ ಅವರಿಗೂ ಇರಲಿಲ್ಲವಂತೆ. ನೋವಿನಿಂದ ಹೊಟ್ಟೆ ಉಚ್ಚಿಕೊಳ್ಳುತ್ತಾ ಮಲಗಿದ್ದ ಅವರನ್ನು ನೋಡಿದ ಕೆಲವು ಸೆಟ್​ ಹುಡುಗರಿಗೆ ಬಹಳ ಖುಷಿಯಾಯಿತಂತೆ. ಅಮಿತಾಭ್​ ಹತ್ತಿರ ಹೋಗಿ, ‘ಚೆನ್ನಾಗಿ ಆ್ಯಕ್ಟ್ ಮಾಡ್ತಿದ್ದೀರಾ ಮುಂದುವರೆಸಿ ಮುಂದುವರೆಸಿ …’ ಎಂದು ಹೇಳಿ ಹೊರಟು ಹೋದರಂತೆ.

ಅದಕ್ಕೆ ಕಾರಣವೂ ಇದೆ. ಆ ದೃಶ್ಯದ ಚಿತ್ರೀಕರಣಕ್ಕೂ ಮುನ್ನ ಕೆಲವು ಸೆಟ್​ ಹುಡುಗರು ಅಮಿತಾಭ್​ ಬಚ್ಚನ್​ ಬಳಿ ಹೋಗಿ ಒಂದು ಮನವಿ ಮಾಡಿದ್ದಾರೆ. ‘ಚಿತ್ರೀಕರಣಕ್ಕೆಂದು ಮುಂಬೈನಿಂದ ಬೆಂಗಳೂರಿಗೆ ಬಂದು ಒಂದು ತಿಂಗಳಾಯಿತು. ಈ ಒಂದು ತಿಂಗಳಲ್ಲಿ ಸತತವಾಗಿ ಚಿತ್ರೀಕರಣ ಮಾಡಿದ್ದೇವೆ. ಒಂದು ದಿನ ಸಹ ಗ್ಯಾಪ್​ ಇಲ್ಲ. ಸುಸ್ತಾಗಿ ಹೋಗಿದೆ. ನಿರ್ದೇಶಕರಿಗೆ ಹೇಳಿ ರಜೆ ಕೊಡಿಸಿ. ರಜೆ ಕೊಡದಿದ್ದರೆ, ಹುಷಾರಿಲ್ಲ ಅಂತಾದರೂ ಹೇಳಿ. ನಿಮಗೆ ಹುಷಾರಿಲ್ಲ ಎಂದರೆ, ನಮಗೆ ಬ್ರೇಕ್​ ಸಿಗುತ್ತದೆ. ಅದರಿಂದಾದರೂ ನಾವೆಲ್ಲ ಸ್ವಲ್ಪ ಉಸಿರಾಡುವಂತಾಗುತ್ತದೆ’ ಎಂದು ಹೇಳಿಕೊಂಡಿದ್ದರಂತೆ. ಅದಕ್ಕೆ ಅಮಿತಾಭ್​ ಬಚ್ಚನ್​, ನಿರ್ದೇಶಕ ಮನಮೋಹನ್​ ದೇಸಾಯಿ ಕೂಲ್​ ಆಗಿದ್ದಾಗ ನೋಡಿಕೊಂಡು ಮಾತನಾಡುವುದಾಗಿ ಹೇಳಿ, ಆ ಹುಡುಗರನ್ನು ಕಳಿಸಿದ್ದಾರೆ.

ಯಾವಾಗ, ಅಮಿತಾಭ್​ ಬಚ್ಚನ್​ ಪೆಟ್ಟು ತಿಂದು ಬಂದು ಮಲಗಿದ್ದನ್ನು ಆ ಹುಡುಗರು ನೋಡಿದರೋ ಅವರಿಗೆ ಖುಷಿಯಾಯಿತಂತೆ. ನಿಜಕ್ಕೂ ಪೆಟ್ಟುಬಿದ್ದಿದೆ ಎಂದು ಗೊತ್ತಿಲ್ಲದ ಅವರು, ತಮಗೆಲ್ಲ ರಜೆ ಕೊಡಿಸುವುದಕ್ಕೆ ಅಮಿತಾಭ್​ ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಅಂದುಕೊಂಡಿದ್ದರಂತೆ. ಅದೇ ಕಾರಣಕ್ಕೆ ಹತ್ತಿರ ಬಂದು, ‘ಚೆನ್ನಾಗಿ ನಟನೆ ಮಾಡ್ತಿದ್ದೀರಾ ಮುಂದುವರೆಸಿ ಮುಂದುವರೆಸಿ …’ ಎಂದು ಪಿಸುಗುಟ್ಟಿ ಹೋದರಂತೆ. ಅವರೇನೋ ನಾಟಕ ಅಂದುಕೊಂಡರು, ತಮಗೆ ನಿಜಕ್ಕೂ ಆರೋಗ್ಯ ಸಮಸ್ಯೆ ಎದುರಾಯಿತು ಎಂದು ಅಮಿತಾಭ್​ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹುಡುಗರಿಗೆ ಒಂದೆರೆಡು ದಿನಗಳ ಬ್ರೇಕ್​ ಬೇಕಿದ್ದು, ತಮ್ಮಿಂದ ಆರು ತಿಂಗಳಷ್ಟು ಸಮಯ ಬ್ರೇಕ್​ ಸಿಕ್ಕಂತಾಯಿತು ಎಂದಿದ್ದಾರೆ. ಈ ಘಟನೆಯ ಬಗ್ಗೆ ಸ್ವತಃ ಅಮಿತಾಭ್​ ಬಚ್ಚನ್​ ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಂದು ಏನೇನಾಯಿತು ಎಂದು ನೆನಪಿಸಿಕೊಂಡಿದ್ದರು. ‘ಕೂಲಿ’ ನಿಮ್ಮ ಚಿತ್ರಜೀವನದಲ್ಲೇ ಒಂದು ಲ್ಯಾಂಡ್​ಮಾರ್ಕ್​ ಸಿನಿಮಾ ಆಯಿತಲ್ಲ ಎಂದು ನಟ ರಿಷಿ ಕಪೂರ್​ ಹೇಳಿದಾಗ, ‘ಲ್ಯಾಂಡ್​ಮಾರ್ಕ್​ ಸಿನಿಮಾನೋ, ಅಲ್ಲವೋ ಗೊತ್ತಿಲ್ಲ. ಆದರೆ, ಸಿನಿಮಾದಿಂದ ಮಾರ್ಕ್​ ಅಂತೂ ಆಯಿತು’ ಎಂದು ತಮಾಷೆ ಮಾಡಿದ್ದರು. ಹೀಗೆ ಪೆಟ್ಟು ತಿಂದ ಅಮಿತಾಭ್​ ಬಚ್ಚನ್​, ಪುನಃ ಕ್ಯಾಮೆರಾ ಎದುರಿಸಿದ್ದು ಆರು ತಿಂಗಳ ನಂತರ. 1983ರ ಜನವರಿ 07ರಂದು ಚಿತ್ರೀಕರಣ ‘ಕೂಲಿ’ ಪುನಃ ಪ್ರಾರಂಭವಾಯಿತಂತೆ. ಈ ಫೋಟೋ ತೆಗೆದಿದ್ದು ಸಹ ಅದೇ ದಿನದಂದು.

Related posts

ಮುಸ್ಲಿಂ ಟೋಪಿ ಧರಿಸಿ ಒಂದೇ ಸಲಕ್ಕೆ ಲಕ್ಷಗಟ್ಟಲೆ ಫಾಲೋವರ್ಸ್ ಕಳಕೊಂಡ ಸಿನಿಮಾ ನಟ..! ಬಕ್ರೀದ್ ಹಬ್ಬದಂದು ಈ ನಟ ಮಾಡಿದ್ದೇನು?

ರಾಯಲ್ಸ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್ ಗೆಲುವು

ಪತ್ನಿ ಅನುಷ್ಕಾ ಶರ್ಮಾ ಜೊತೆ  ಬೀಚ್‌ನಲ್ಲಿ ಕೊಹ್ಲಿ ಮೋಜು-ಮಸ್ತಿ..! ಶರ್ಟ್‌ಲೆಸ್ ಫೋಟೋ ವೈರಲ್