ಮಂಗಳೂರು: ಉಳ್ಳಾಲದ ಮಾಜಿ ಶಾಸಕ ದಿವಂಗತ ಬಿ.ಎಂ. ಇದಿನಬ್ಬಹೆಸರು ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಯಲ್ಲಿದೆ. ಐದಾರು ವರ್ಷಗಳ ಹಿಂದೆ ಅವರ ಮರಿಮಗಳು ಕೇರಳದಲ್ಲಿ ನಾಪತ್ತೆಯಾಗಿ ಐಸಿಸ್ ಸೇರಿದ್ದಾಳೆಂಬ ವಿಚಾರ ಬಂದಾಗ ಇದಿನಬ್ಬ ಹೆಸರು ಮುನ್ನೆಲೆಗೆ ಬಂದಿತ್ತು. ಇದೀಗ ಮಗ,ಮೊಮ್ಮಗ ಹಾಗೂ ಮೊಮ್ಮಗನ ಹೆಂಡತಿಗೂ ಐಸಿಸ್ ಉಗ್ರರ ನಂಟಿದೆ ಅನ್ನುವ ಸ್ಫೋಟಕ ಮಾಹಿತಿ ಎನ್ಐಎ ತನಿಖೆಯಿಂದ ಹೊರಬಿದ್ದಿದೆ.
ಮತಾಂತರಗೊಂಡಿದ್ದ ಕೊಡಗಿನ ಹುಡುಗಿ
ಸುಂದರ ವಿದ್ಯಾವಂತ ಹುಡುಗಿ. ಹೆಸರು ದೀಪ್ತಿ ಮಾರ್ಲ. ಸಂಪ್ರದಾಯಸ್ಥ ಹಿಂದೂ ಕುಟುಂಬದ ಹಿನ್ನೆಲೆಯವಳು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಡ್ಡೆ ಹೊಸೊರು ಗ್ರಾಮದವಳು. ಆಕೆ ಮಂಗಳೂರಿನಲ್ಲಿ ಬಿಡಿಎಸ್ ಓದುತ್ತಿದ್ದಾಗ ಇದಿನಬ್ಬ ಅವರ ಮೊಮ್ಮಗನ ಪರಿಚಯವಾಗಿತ್ತು. ನಂತರದ ದಿನಗಳಲ್ಲಿ ಇವರಿಬ್ಬರು ಪ್ರೇಮಿಗಳಾದರು. ಮದುವೆಯೂ ಆದರು. ಕೊಡಗಿನಲ್ಲಿ ಈ ಮದುವೆಗೆ ವಿರೋಧ ವ್ಯಕ್ತವಾಗಿದ್ದರಿಂದ ದೀಪ್ತಿ ಕುಟುಂಬದ ಸಂಪರ್ಕವನ್ನೇ ಕಡಿದುಕೊಂಡಳು. ಮಾತ್ರವಲ್ಲ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆದಳು. ಹೆಚ್ಚು ಶಿಕ್ಷಣ ಪಡೆಯದ ಅನಾಸ್ ಮೇಲಿನ ಪ್ರೀತಿಯಿಂದ ತನ್ನ ಹೆಸರನ್ನು ದೀಪ್ತಿ ಬದಲಿಗೆ ಮರಿಯಂ ಎಂದು ಬದಲಾಯಿಸಿಕೊಂಡಳು.
ಐಸಿಸ್ ನೆಟವರ್ಕ್ ನ ಮಾಸ್ಟರ್ ಮೈಂಡ್ ಈಕೆ..! ದೀಪ್ತಿ ಅಲಿಯಾಸ್ ಮರಿಯಂ ನಂತರದ ದಿನಗಳಲ್ಲಿ ಕಟ್ಟರ್ ಮುಸ್ಲಿಂ ಆದಳು. ತೀವ್ರವಾದಿ ಗುಂಪುಗಳನ್ನು ಎತ್ತಿ ಕಟ್ಟಲು ಆರಂಭಿಸಿದಳು. ತೀವ್ರವಾದಿಗಳ ಬಗ್ಗೆ ಮೃದುಧೋರಣೆ ಹೊಂದಿದ್ದ ಯುವಕರನ್ನು ಒಂದುಗೂಡಿಸುತ್ತಿದ್ದಳು. ಹಣ ಸಂಗ್ರಹಿಸಿ ಅದನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸುವುದು ಆಕೆಯ ಉದ್ದೇಶವಾಗಿತ್ತು. ಎನ್ಐಎ ತಂಡ ದೇಶಾದ್ಯಂತ ದಾಳಿ ನಡೆಸಿದಾಗ ಸಿಕ್ಕಿ ಬಿದ್ದವರು ಮರಿಯಂ ಹೆಸರನ್ನು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ ಎಂದು ಇಂಡಿಯಾ ಟು ಡೇ ವರದಿ ಮಾಡಿದೆ.