ಮೈಸೂರು: ತುಂಬಿ ತುಳುಕಿದ ನೀರಿನಲ್ಲಿ ಇನ್ಮುಂದೆ ಆನೆಗಳು ಆರಾಮವಾಗಿ ಈಜಾಡಬಹುದು. ಹೌದು ಈ ವ್ಯವಸ್ಥೆ ಇರೋದು ಸಮೀಪದ ಮೈಸೂರಿನಲ್ಲಿ. ಅಷ್ಟಕ್ಕೂ ಇದು ವಯಸ್ಸಾದ ಆನೆಗಳಿಗೆ ಇರುವ ಬೃಹತ್ ಗಾತ್ರದ ಈಜುಕೊಳ. ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಈ ಈಜುಕೊಳವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಈ ಈಜುಕೊಳದಲ್ಲಿ ಆನೆಗಳು ಅಡ್ಡಾಡುತ್ತಾ ಖುಷಿಯಾಗಿ ಕಾಲ ಕಳೆಯುತ್ತಿವೆ. ಆನೆಗಳು ನೀರಿನಲ್ಲಿ ವಿಹಾರ ನಡೆಸುತ್ತಿರುವ ದೃಶ್ಯವನ್ನು ಜನ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತಿರುವ ದೃಶ್ಯ ಕುತೂಹಲ ಕೆರಳಿಸಿದೆ.
ಇಂತಹದೊಂದು ಈಜುಕೊಳ ರಾಜ್ಯದ ಮಟ್ಟಿಗೆ ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರವನ್ನು ಹೊರತು ಪಡಿಸಿ ಬೇರೆಲ್ಲೂ ಇಲ್ಲ ಎಂದು ಹೇಳಲಾಗ್ತಿದೆ. ಆನೆಗಳ ಆರೋಗ್ಯದ ಹಿತದೃಷ್ಟಿಯಿಂದ ಈಜುಕೊಳವನ್ನು ನಿರ್ಮಿಸಲಾಗಿದ್ದು, ಒಂದು ವೇಳೆ ಈ ಪ್ರಯೋಗ ಯಶಸ್ಸು ಆಗಿದ್ದೇ ಆದರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆ ಈಜುಕೊಳ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ವಯಸ್ಸಾದ ಆನೆಗಳಿಗೆ ಸಾಮಾನ್ಯವಾಗಿ ಕಾಡುವ ಸಂದಿವಾತದಂತಹ ರೋಗಗಳಿಗೆ ರಾಮಬಾಣವಾಗಲಿದೆ ಎಂಬ ಉತ್ತರ ಮೃಗಾಲಯ ಮೂಲಗಳಿಂದ ಕೇಳಿ ಬಂದಿದೆ. ಆನೆಗಳಲ್ಲಿ ಕಂಡು ಬರುವ ಸಂದಿವಾತಕ್ಕೆ ಈಜುಕೊಳ ಮದ್ದು ಎಂದು ಹೇಳಲಾಗುತ್ತಿದ್ದು, ಆ ಕಾರಣಕ್ಕಾಗಿ ಪ್ರಾಯೋಗಿಕವಾಗಿ ವಿನೂತನ ಪ್ರಯತ್ನವನ್ನು ಮಾಡಲಾಗಿದೆ.