ನ್ಯೂಸ್ ನಾಟೌಟ್: ಮಡಿಕೇರಿ ಸಂಪರ್ಕಿಸುವ ಏಕೈಕ ರಸ್ತೆಯೂ ಕುಸಿತದ ಭೀತಿಯ ಹಿನ್ನೆಲೆಯಲ್ಲಿ ಸಂಪಾಜೆ ಗೇಟ್ ನಲ್ಲಿ ಸೋಮವಾರ ರಾತ್ರಿಯಿಂದ ತಡೆಯಲಾಗಿದ್ದ ಲಾರಿಗಳಿಗೆ ಮಂಗಳವಾರ ಬೆಳಗ್ಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ವಾಹನಗಳು ವಿರಾಜಪೇಟೆ ಮೂಲಕ ದಾರಿಯನ್ನು ಬಳಸಿಕೊಂಡು ಹುಣಸೂರು ಮಾರ್ಗವಾಗಿ ಮೈಸೂರು ಅಥವಾ ಬೆಂಗಳೂರಿಗೆ ಹೋಗಬಹುದಾಗಿದೆ.
ಮಡಿಕೇರಿ –ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಮಡಿಕೇರಿ ಸಮೀಪದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಬರೆ ಕುಸಿತದ ಹಿನ್ನೆಲೆಯಲ್ಲಿ ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ತಾಳತ್ತಮನೆ ಮೆಕೇರಿ ರಸ್ತೆ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿನ್ನೆ ತಡರಾತ್ರಿ ಮೆಕೇರಿ ರಸ್ತೆ ಜರಿಯಲು ಶುರುವಾದ ಬಳಿಕ ಸಂಪಾಜೆ ಚೆಕ್ ಪೋಸ್ಟ್ ಬಳಿ ಎಲ್ಲ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ಇದರಿಂದ ಸಂಪಾಜೆ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಕೆಎಸ್ ಆರ್ ಟಿಸಿ ಬಸ್ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಹೋಗುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಲಾರಿಗಳು ರಾತ್ರಿಯಿಂದ ಬೆಳಗ್ಗಿನ ತನಕ ಸುಮಾರು ೧ ಕಿ.ಮೀ.ಗೂ ಹೆಚ್ಚು ಕ್ಯೂನಲ್ಲಿ ನಿಂತುಕೊಂಡಿದ್ದವು. ಇದೀಗ ವಿರಾಜಪೇಟೆ ರಸ್ತೆ ಮೂಲಕ ವ್ಯವಸ್ಥೆಯಾದ ನಂತರ ಸಂಪಾಜೆ ಗೇಟ್ ನಿಂದ ವಾಹನಗಳನ್ನು ಬಿಡಲಾಗಿದೆ. ಸುತ್ತಿ ಬಳಸಿಕೊಂಡು ಹೋಗುವುದು ಬಿಟ್ಟರೆ ಲಾರಿ ಚಾಲಕರಿಗೆ ಬೇರೆ ದಾರಿ ಇಲ್ಲದಾಗಿದೆ ಎಂದು ಚೆಕ್ ಪೋಸ್ಟ್ ಸಿಬ್ಬಂದಿಯೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಆದರೆ ಮಡಿಕೇರಿ, ಕುಶಾಲನಗರಕ್ಕೆಗೆ ಹೋಗುವ ಲಾರಿ ಚಾಲಕರಿಗೆ ಸಾಕಷ್ಟು ಸವಾಲು ಎದುರಾಗಲಿದೆ ಎಂದೂ ಇದೇ ವೇಳೆ ತಿಳಿಸಿದರು.