ನ್ಯೂಸ್ ನಾಟೌಟ್ : ಪ್ರೀತಿ, ಕಾಳಜಿ, ಕರುಣೆ ಹಂಚೋಣ ಎಂಬ ಶೀರ್ಷಿಕೆಯಡಿಯಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಅ. 11ರಂದು ನೂಜಿಬಾಳ್ತಿಲದ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಬೆಥನಿ ಕಾನ್ವೆಂಟ್ ಮೇಲ್ವಿಚಾರಕಿ ವೀಣಾ ಮಾತನಾಡಿ, ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ಕರುಣೆರಹಿತ ಕೃತ್ಯ, ಅವರ ತ್ಯಾಗ, ಪ್ರೀತಿ ಮತ್ತು ಕಾಳಜಿಗೆ ಸದಾ ಕೃತಜ್ಞರಾಗಿ. ಅವರು ನಿಮ್ಮ ಜೀವನದ ಮೊದಲ ಗುರುಗಳು. ಅವರ ಸೇವೆ ನಿಮ್ಮ ಧರ್ಮ ಎಂದರು.
ಕಡಬ ಸುಳ್ಯ ವಲಯದ ಚಟುವಟಿಕೆಯ ಸಂಯೋಜಕಿ ಆರತಿ ಕೆ. ಮಾತನಾಡಿ, ಸೇವೆ ಎಂದರೆ ಕೇವಲ ದೈಹಿಕ ಸೇವೆಯಲ್ಲ ಮಾನವೀಯತೆಯನ್ನು ತೋರುವುದೇ ನಿಜವಾದ ಸೇವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿ ಗಳಲ್ಲಿ ಮಾನವೀಯತೆ ಜೊತೆಗೆ ಸಾಮಾಜಿಕ ಜವಾಬ್ದಾರಿಗಳ ಅರಿವು ಮೂಡಿಸುತ್ತದೆ ಎಂದು ಹೇಳಿದರು.
ಎನ್.ಎಂ.ಸಿ ಘಟಕಾಧಿಕಾರಿಗಳಾದ ಚಿತ್ರಲೇಖಾ ಕೆ.ಎಸ್ ಹಾಗೂ ಹರಿಪ್ರಸಾದ್ ಅತ್ಯಾಡಿ ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ಘಟಕಾಧಿಕಾರಿಗಳಾದ ಶೃತಿ, ಬೆಳ್ಳಾರೆ ಪ್ರಥಮ ದರ್ಜೆ ಕಾಲೇಜಿನ ಘಟಕಾಧಿಕಾರಿಗಳಾದ ಗಿರೀಶ್ ಉಪಸ್ಥಿತರಿದ್ದರು. ನ್.ಎಸ್.ಎಸ್ ಘಟಕದ ಸ್ವಯಂ ಸೇವಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹರಿಸಿದರು.













