ಮಡಿಕೇರಿ: ಬೋಯಿಕೇರಿ ಸಮೀಪ ಯೋಧ ಅಶೋಕ್ ಕುಮಾರ್ ಹಾಗೂ ಅವರ ಕುಟುಂಬದವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಗಾಳಿಬೀಡಿನಲ್ಲಿರುವ ಯೋಧ ಅಶೋಕ್ ಕುಮಾರ್ ಅವರ ಮನೆಗೆ ಶನಿವಾರ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದ ಸಂಸದರು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ದುಷ್ಕರ್ಮಿಗಳನ್ನು ಹಾಗೇ ಬಿಡುವ ಪ್ರಶ್ನೆಯೇ ಇಲ್ಲ. ಮತ್ತಷ್ಟು ಕಠಿಣ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಗುರುವಾರದೊಳಗಾಗಿ ದುಷ್ಕರ್ಮಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲೇಬೇಕು ಎಂದು ಸೂಚಿಸಿದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಘಟನೆಯನ್ನು ಖಂಡಿಸಿದರಲ್ಲದೆ, ಸೈನಿಕ ಹಾಗೂ ಅವರ ಕುಟುಂಬದ ಮೇಲೆ ನಡೆದಿರುವ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಪೊಲೀಸ್ ಅಧಿಕಾರಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಮತ್ತಿತರ ಪ್ರಮುಖರು ಹಾಜರಿದ್ದರು.