ನ್ಯೂಸ್ ನಾಟೌಟ್ : ಆಂಬ್ಯುಲೆನ್ಸ್ ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಮಧ್ಯಪ್ರದೇಶದ ಮೌಗಂಜ್ ನಲ್ಲಿ ನಡೆದಿದ್ದು, ತಡವಾಗಿ (ನ.22ರಂದು) ಬೆಳಕಿಗೆ ಬಂದಿದೆ.
ಒಟ್ಟು ನಾಲ್ವರು ಆರೋಪಿಗಳಿದ್ದು, ಆ ಪೈಕಿ ಇಬ್ಬರು, ಮೌಗಂಜ್ ಜಿಲ್ಲೆಯ ನೈಗರ್ಹಿ ತಹಸಿಲ್ ನ ನಿವಾಸಿಗಳಾದ ಅಂಬ್ಯುಲೆನ್ಸ್ ಚಾಲಕ ವಿರೇಂದ್ರ ಚತುರ್ವೇದಿ ಹಾಗೂ ಆತನ ಸ್ನೇಹಿತ ರಾಜೇಶ ಕೇವತ್ ನನ್ನು ಬಂಧಿಸಲಾಗಿದೆ.
ಮೌಗಂಜ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಧ್ಯಪ್ರದೇಶ ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರು, ಮಕ್ಕಳು ಹಾಗೂ ಬಿಪಿಎಲ್ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಜನನಿ ಎಕ್ಸ್ಪ್ರೆಸ್ ಎಂಬ ಆಂಬ್ಯುಲೆನ್ಸ್ ಸೌಲಭ್ಯ ಒದಗಿಸಿತ್ತು. ಈ ಅಂಬುಲೆನ್ಸ್ ನಲ್ಲೇ ಕೃತ್ಯ ನಡೆದಿದೆ.
ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಸಾಕೇತ್ ಪಾಂಡೆ ಮಾಹಿತಿ ಪ್ರಕಾರ, ಅಪ್ರಾಪ್ತೆಯು ತನ್ನ ಸಹೋದರಿ ಹಾಗೂ ಮಾವನೊಂದಿಗೆ ಅಂಬುಲೆನ್ಸ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕ ಹಾಗೂ ಆತನ ಮೂವರು ಸಹಚರರು ಸಹ ಅಂಬುಲೆನ್ಸ್ ನಲ್ಲಿದ್ದರು. ಮಾರ್ಗಮಧ್ಯೆ ನೀರು ತರಲೆಂದು ಬಾಲಕಿಯ ಸಹೋದರಿ ಹಾಗೂ ಆಕೆಯ ಮಾವ ಕೆಳಗಿಳಿದಿದ್ದಾರೆ. ಅವರಿಗಾಗಿ ಕಾಯದೇ ಆಂಬ್ಯುಲೆನ್ಸ್ ಚಲಾಯಿಸಿಕೊಂಡು ಬಂದಿದ್ದು, ಚಾಲಕನ ಸ್ನೇಹಿತ ರಾಕೇಶ್ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಆ ದಿನ ರಾತ್ರಿ ಆಕೆಯನ್ನು ವಾಹನದಲ್ಲಿಯೇ ಇರಿಸಿಕೊಂಡು ಮಾರನೇ ದಿನ ರಸ್ತೆಯ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ. ಬಳಿಕ ಅಪ್ರಾಪ್ತೆ ಮನೆ ತಲುಪಿದ್ದು, ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ಇದ್ದರಿಂದ ಗಾಬರಿಯಾದ ತಾಯಿ ಮನೆಯ ಮರ್ಯಾದೆ ಪ್ರಶ್ನೆ ಎಂದು ದೂರು ದಾಖಲಿಸಿರಲಿಲ್ಲ, ಹಾಗಾಗಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಳಿಕ ನ.25 ರಂದು ಸಂತ್ರಸ್ತೆ ಹಾಗೂ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ನ.27 ರಂದು ನಾಲ್ವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಈ ಕೃತ್ಯದಲ್ಲಿ ಸಂತ್ರಸ್ತೆಯ ಸಹೋದರಿ ಹಾಗೂ ಮಾವ ಭಾಗಿಯಾಗಿರುವುದಾಗಿ ತಿಳಿಸಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ಎಸಗಿರುವುದಾಗಿ ದೃಢಪಟ್ಟಿದೆ.
Click