ನ್ಯೂಸ್ ನಾಟೌಟ್: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದ್ದನ್ನು ಅರಗಿಸಿಕೊಳ್ಳಲಾಗದ ಪಕ್ಷದ ನಿಷ್ಠಾವಂತ ಕಾರ್ಯಕರ್ತನೊಬ್ಬ ಫಲಿತಾಂಶ ಹೊರಬೀಳುತ್ತಿದ್ದಂತೆ ತನ್ನ ಮನೆಯಲ್ಲಿನ ಟಿವಿಯನ್ನು ಹೊಡೆದು ಹಾಕಿ ಬಿಜೆಪಿ ನಾಯಕರ ಒಳಜಗಳವನ್ನು ಖಂಡಿಸಿ ಆಕ್ರೋಶ ಹೊರಹಾಕಿದ್ದಾನೆ.
ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಎನ್ಡಿಎ (ಬಿಜೆಪಿ-ಜೆಡಿಎಸ್) ಸೋಲು ಕಂಡಿದೆ. ಹೀಗಾಗಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ. ಈ ಸೋಲು ಹಲವಾರು ಮಂದಿ ಕಾರ್ಯಕರ್ತರನ್ನೂ ಕೂಡ ದೃತಿಗೆಡಿಸಿದೆ. ಬಿಜೆಪಿ ಹಿರಿಯ ಕಾರ್ಯಕರ್ತ ವಿಜಯಪುರ ಜಿಲ್ಲೆ ಕೋಲ್ಹಾರ ಪಟ್ಟಣದ ಬಿಜೆಪಿ ಅಭಿಮಾನಿ ವೀರಭದ್ರಪ್ಪ ಅವರು ಉಪಚುನಾವಣೆ ಸೋಲಿನಿಂದಾಗಿ ಮನೆಯಲ್ಲಿದ್ದ ಟಿವಿಯನ್ನು ಹೊರಗೆ ತಂದು ರಸ್ತೆಗೆ ಎಸೆದಿದ್ದಾರೆ. ಬಳಿಕ ಟಿವಿಗೆ ಕಲ್ಲಿನಿಂದ ಒಡೆದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಟಿವಿ ಒಡೆದ ಬಳಿಕ ಮಾತನಾಡಿರುವ ವೀರಭದ್ರಪ್ಪ. ಪ್ರಧಾನಿ ಮೋದಿ ಅವರು ರಾಜ್ಯದ ಬಿಜೆಪಿ ಮುಖಂಡರ ಸಭೆ ತೆಗೆದುಕೊಳ್ಳಬೇಕು. ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲದ ಕಾರಣ ಕಾರ್ಯಕರ್ತರು ಬಲಿಪಶುವಾಗುತ್ತಿದ್ದಾರೆ. ಬಿಜೆಪಿಯಲ್ಲಿನ ಎಲ್ಲಾ ನಾಯಕರು ಒಕ್ಕಟ್ಟಾಗಬೇಕಿದೆ. ಇಲ್ಲಂದರೆ ಮುಖಂಡರ ಕೈಲಿ ಕಾರ್ಯಕರ್ತರು ಸಿಕ್ಕು ಬಲಿಯಾಗುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಒಂದು ಕಡೆ ವಿಜಯೇಂದ್ರ ಒಂದು ಕಡೆ ಹೋಗುತ್ತಾರೆ. ಹೀಗಾದರೆ ಹೇಗೆ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.