ನ್ಯೂಸ್ ನಾಟೌಟ್: ಜಿಮ್ನಲ್ಲಿ ಪರಿಚಯವಾದ ಯುವತಿ ಜತೆ ಆತ್ಮೀಯತೆ ಬೆಳೆಸಿದ ಪ್ರೊಫೆಸರ್ ಒಬ್ಬರಿಗೆ 3 ಕೋಟಿ ರೂ. ಪಂಗನಾಮ ಇಟ್ಟ ಯುವತಿ ಇದೀಗ ತನ್ನ ಇತರ ಸಹಚರರೊಂದಿಗೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಬಂಧಿತರನ್ನು ಉಡುಪಿ ಮೂಲದ ತಬಸುಂ ಬೇಗಂ (38), ಕಾರ್ಕಳದ ಅಜೀಂ ಉದ್ದೀನ್ (41), ಹಾಗೂ ಅಭಿಷೇಕ್ (33) ಎಂದು ಗುರುತಿಸಲಾಗಿದೆ.
2018ರಲ್ಲಿ ಬೆಂಗಳೂರಿನ ಆರ್.ಟಿ. ನಗರದಲ್ಲಿ ಆರೋಪಿ ತಬಸಂ ಬೇಗಂ ಸಹೋದರ ಅಜೀಂ ಉದ್ದೀನ್ ಮಾಲಿಕತ್ವದ ಜಿಮ್ಗೆ ಪ್ರೊಫೆಸರ್ ಒಬ್ಬರು ಸೇರಿಕೊಂಡಿದ್ದರು. ಆ ವೇಳೆ ತಬುಸಂ ಬೇಗಂಳ ಪರಿಚಯವಾಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ನಾನು ಹೆಚ್ಚಿನ ವ್ಯಾಸಂಗವನ್ನು ಮಾಡುತ್ತೇನೆ. ಅದಕ್ಕೆ ಹಣಕಾಸಿನ ಸಹಾಯ ಮಾಡುವಂತೆ ಪ್ರೊಫೆಸರ್ ಬಳಿ ಆಕೆ ಕೇಳಿಕೊಂಡಳು. ಇದಕ್ಕೆ ದೂರುದಾರ ಪ್ರೊಫೆಸರ್ ಸಹಾಯ ಮಾಡುವುದಾಗಿ ಹೇಳಿದ್ದರು. ನಾನು ತಜೀಮ್ ಎಂಬ ಮಗುವನ್ನು ದತ್ತು ಪಡೆದು ಸಾಕುತ್ತಿರುವುದಾಗಿ ಆಕೆ ಪ್ರೊಫೆಸರ್ ಬಳಿ ಹೇಳಿಕೊಂಡಿದ್ದಳು.
ಬಳಿಕ ಜಿಮ್ಗೆ ಬರುವುದನ್ನು ಬೇಗಂ ನಿಲ್ಲಿಸಿದಳು. ಈ ಬಗ್ಗೆ ಆಕೆಯ ಅಣ್ಣನ ಬಳಿ ದೂರುದಾರರು ವಿಚಾರಿಸಿದಾಗ, ತಬಸಂಳನ್ನು ಆಕೆಯ ಪತಿ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದ. ಆಕೆಗೆ ಮದುವೆಯಾಗಿ ಮಗು ಇರುವ ವಿಷಯ ತಿಳಿದ ದೂರುದಾರರು, ಆತಂಕಗೊಂಡು ತಬಸಂಗೆ ಕರೆ ಮಾಡಿ ವಿಚಾರಿಸಿ ಮದುವೆಯಾಗಿ ಮಗು ಇರುವ ವಿಚಾರವನ್ನು ಮರೆಮಾಚಿರುವ ಬಗ್ಗೆ ಪ್ರಶ್ನಿಸಿದ್ದರು. ಇದರಿಂದಾಗಿ ತಬಸಂ ಆಕ್ರೋಶಗೊಂಡು ಆಕೆಯೊಂದಿಗೆ ಖಾಸಗಿಯಾಗಿ ಇರುವ ಪೋಟೋ ಮತ್ತು ವಿಡಿಯೋಗಳನ್ನು ದೂರುದಾರರಿಗೆ ಕಳುಹಿಸಿ ಇವುಗಳನ್ನು ನಿನ್ನ ಕಚೇರಿಗೆ ಹಾಗೂ ಕುಟುಂಬಸ್ಥರಿಗೆ ಹಂಚಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದಳು. ನಂತರ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ್ದಳು.
ಇನ್ನು 2019ರಲ್ಲಿ ಆಕೆಯ ಸಹೋದರ ಅಜೀಂ ದೂರುದಾರರಿಂದ ಇದೇ ವಿಚಾರಕ್ಕೆ ಹಣ ಪಡೆದಿದ್ದ. ಈ ನಡುವೆ ಪೊಲೀಸ್ ಸೋಗಿನಲ್ಲಿ ಆರೋಪಿ ಅಭಿಷೇಕ್, ತಬಸಂಪರವಾಗಿ ಆಕೆ ಕೇಳುವಷ್ಟು ಹಣ ಕೊಡದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಆತಂಕಗೊಂಡ ದೂರುದಾರರು ಸಾಲಗಳನ್ನು ಮಾಡಿ ಹಂತ ಹಂತವಾಗಿ 3 ಕೋಟಿ ರೂ. ನೀಡಿದ್ದರು. ಪಡೆದಿರುವ ಸಾಲಕ್ಕೆ ಪ್ರತಿ ತಿಂಗಳು 1.25 ಲಕ್ಷ ಇಎಂಐ ಕಟ್ಟುತ್ತಿದ್ದಾರೆ. ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆಯಿಟ್ಟಾಗ ದೂರುದಾರರು ಸಿಸಿಬಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಇದೀಗ ಸಿಸಿಬಿ ಪೊಲೀಸರು ಆರೋಫಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.