ನ್ಯೂಸ್ ನಾಟೌಟ್: ಮಂಗಳೂರು ನಗರದ ಮಳಲಿ ದರ್ಗಾ ವಿವಾದದ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನೆ ನಡೆದು ಅದು ದೈವಿ ಸಾನಿಧ್ಯದ ಸ್ಥಳ ಎನ್ನುವುದು ತಿಳಿದು ಬಂದಿದೆ. ಇದನ್ನು ತಾಂಬೂಲ ಪ್ರಶ್ನೆ ವೇಳೆ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ತಿಳಿಸಿದ್ದಾರೆ.
ಮಳಲಿ ದರ್ಗಾದ ಅನತಿ ದೂರದಲ್ಲೇ ಇರುವ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು. ದರ್ಗಾ ಸುತ್ತಮುತ್ತ ದೈವಿಕ ಶಕ್ತಿ ಇದೆಯೇ ಎಂಬ ಬಗ್ಗೆ ಪ್ರಶ್ನಾ ಚಿಂತನೆ ನಡೆಯಿತು. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆಯ ಮೇಲೆ ದೈವೀ ಶಕ್ತಿ ಪತ್ತೆಯಾಯಿತು ಎಂದು ತಿಳಿಸಲಾಗಿದೆ. ತಾಂಬೂಲ ಪ್ರಶ್ನೆ ನಡೆಯಲಿರುವ ಹಿನ್ನೆಲೆಯಲ್ಲಿ ಭಜನಾ ಮಂದಿರದ ಸುತ್ತ ಡಿ.ಸಿ.ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಎಸಿಪಿ, ಏಳು ಮಂದಿ ಇನ್ ಸ್ಪೆಕ್ಟರ್ ಗಳು, 12 ಮಂದಿ ಪಿ.ಎಸ್.ಐ, 10 ಮಂದಿ ಎ.ಎಸ್.ಐ, 120 ಸಿವಿಲ್ ಸಿಬ್ಬಂದಿ ಸೇರಿದಂತೆ 3 ಕೆ ಎಸ್ ಆರ್ ಪಿ ತುಕಡಿ, 3 ಸಿ.ಎ.ಆರ್ ತುಕಡಿ ಸ್ಥಳದಲ್ಲಿ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ವಿವಾದಿತ ದರ್ಗಾ ಸ್ಥಳದಲ್ಲೂ ಭಾರಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ದರ್ಗಾದ 500 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.