ನ್ಯೂಸ್ ನಾಟೌಟ್: ಉಗ್ರ ಪ್ರತಿಭಟನೆಯೊಂದಕ್ಕೆ ವಿಶ್ವ ಹಿಂದೂ ಪರಿಷತ್ ಮಂಗಳೂರಿನಲ್ಲಿ ಕರೆ ನೀಡಿದೆ. ಅಕ್ಟೋಬರ್ ಅ.15ರಂದು ಹಿಂದೂ ಬಂಧುಗಳೆಲ್ಲ ಒಟ್ಟಾಗಿ ಸೇರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಅನ್ನುವ ಕರೆಯನ್ನು ನೀಡಲಾಗಿದೆ.
ದ್ವೇಷ ಭಾಷಣ ಆರೋಪದಡಿ ನಗರದ ಪ್ರತಿಷ್ಠಿತ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರುಣ್ ಉಳ್ಳಾಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸದ್ಯ ಈ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಅ.15ಕ್ಕೆ ಮಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಹಿಂದೂ ನಾಯಕರು ಪತ್ರಿಕಾಗೋಷ್ಠಿ ನಡೆಸಿದರು. ವಿಹೆಚ್ಪಿ ಮುಖಂಡ ಶಿವಾನಂದ ಮೆಂಡನ್, ಹಿಂದೂಗಳನ್ನು ಗುರಿಯಾಗಿಸಿ ಅರುಣ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಡಾ.ಅರುಣ್ ಉಳ್ಳಾಲ್ ಪರವಾಗಿ ವಿಹೆಚ್ಪಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ದ್ವೇಷ ಭಾಷಣ ಮಾಡಿದ್ದಾರೆ ಎಂದು ಡಾ ಅರುಣ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಡಾ ಅರುಣ್ ಉಪನ್ಯಾಸಕರಾಗಿದ್ದ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಯಿಂದ ವಜಾ ಮಾಡಲಾಗಿದೆ. ಅವರು ತಮ್ಮ ಫ್ರೀ ಸಮಯದಲ್ಲಿ ಧರ್ಮ ಶಿಕ್ಷಣ ನೀಡುತ್ತಿದ್ದರು. ಇದನ್ನು ನೆಪ ಮಾಡಿ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಡಾ ಅರುಣ್ ಅವರನ್ನು ವಜಾ ಮಾಡಿದೆ. ಇದೇ ರೀತಿ ಹಲವಾರು ಹಿಂದೂ ಉಪನ್ಯಾಸಕರನ್ನು ಕೂಡ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆ ವಜಾ ಮಾಡಿದೆ ಎಂದಿದ್ದಾರೆ.
ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆ ತಾರತಮ್ಯ ಧೋರಣೆ ಅನುಸರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ನ್ಯಾಯ ಸಿಗುತ್ತಿಲ್ಲ. ರಾಜ್ಯದಲ್ಲಿ ಹಿಂದೂ ವಿರೋಧಿ ಸರಕಾರ ಇದೆ. ಇತ್ತೀಚೆಗೆ ರಾಜ್ಯಪಾಲರ ವಿರುದ್ಧ ಎಂಎಲ್ಸಿ ಐವನ್ ಡಿಸೋಜಾ ಬಾಂಗ್ಲಾ ಮಾದರಿ ದಾಳಿ ಮಾಡುವ ಎಚ್ಚರಿಕೆ ನೀಡಿದ್ದರು. ಅವರ ವಿರುದ್ದ ಈವರೆಗೂ ಎಫ್ಐಆರ್ ಆಗಿಲ್ಲ. ರಾಜ್ಯ ಸರಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.