ನ್ಯೂಸ್ ನಾಟೌಟ್: ಅರೆಭಾಷಿಕರು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಅರೆಭಾಷೆ ಕಲಿಸಬೇಕು. ಆಗ ಮಾತ್ರ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಮಡಿಕೇರಿ ಗ್ರಾಮಾಂತರ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜಗಳ ಒಕ್ಕೂಟ ಸಭಾಂಗಣದಲ್ಲಿ ಭಾನುವಾರ ನಡೆದ ಮಡಿಕೇರಿಯಲ್ಲಿ ನಡೆದ ಅರೆಭಾಷೆ ಬರಹಗಾರರು ಮತ್ತು ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಅರೆಭಾಷಿಗರು ಇದ್ದು, ಅರೆಭಾಷೆ ಮಾತನಾಡುವಂತಾಗಬೇಕು ಬರಹಗಾರನೂ ಒಬ್ಬ ಕಲಾವಿದ, ಅವನ ಕಲೆಯ ಮೂಲ ಭಾಷೆ ಆಗಿರುತ್ತದೆ. ಆ ಭಾಷೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಆತ ಕರಗತ ಮಾಡಿದರೆ ಉತ್ತಮ ಬರಹಗಾರನಾಗಿ ಮೂಡಿಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಮಾತನಾಡಿ ಸಾಹಿತ್ಯ ನಮ್ಮಲ್ಲೇ ಇರುವಂತಹ ವಸ್ತು, ಅದನ್ನು ಗುರುತಿಸಿ ನಾವು ಹೊರಗೆ ತೆಗೆಯಬೇಕು. ಸಣ್ಣ ಸಣ್ಣ ವಿಷಯಗಳಿಂದ ಬರವಣಿಗೆ ಪ್ರಾರಂಭ ಮಾಡಿದರೆ ನಂತರ ಅದೇ ನಮಗೆ ದೊಡ್ಡ ಸಾಹಿತ್ಯ ಬರೆಯಲು ಅಡಿಪಾಯ ಆಗುತ್ತದೆ ಎಂದರು. ಸಾಹಿತಿ, ವಕೀಲರಾದ ಕುಡೇಕಲ್ಲು ವಿದ್ಯಾಧರ ಅವರು ಮಾತನಾಡಿ ಸಾಹಿತ್ಯದಲ್ಲಿ ಮೌಡ್ಯತೆ ಇರಬಾರದು. ಹೆಚ್ಚು ಹೆಚ್ಚು ವಾಸ್ತವದ ವಿಚಾರಗಳಿಗೆ ಒತ್ತು ನೀಡಬೇಕೆಂದು ಸಲಹೆ ಮಾಡಿದರು.
ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಅವರು ಸಂವಾದವನ್ನು ನಡೆಸಿಕೊಟ್ಟರು. ಸಂವಾದದಲ್ಲಿ ಸಭಿಕರು ವಿವಿಧ ವಿಷಯಗಳನ್ನು ಮಂಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಅರೆಭಾಷಿಕರು ಕವನ, ಲೇಖನ, ಹನಿಗವನ, ಪ್ರಬಂಧ, ಕವಿತೆ ಹೀಗೆ ವಿವಿಧ ಬರಹ ಬರೆಯುವಂತಾಗಬೇಕು ಕರೆ ನೀಡಿದರು. ಅಕಾಡೆಮಿ ವತಿಯಿಂದ ‘ಹಿಂಗಾರ’ ತ್ರೈಮಾಸಿಕ ಪತ್ರಿಕೆ ಹೊರತರಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅರೆಭಾಷೆಯಲ್ಲಿ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಅರೆಭಾಷಿಕರು ಸಾಹಿತ್ಯ, ಸಂಸ್ಕೃತಿ, ಕಲೆಗಳ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು. ಅಕಾಡೆಮಿ ಸದಸ್ಯರಾದ ಕುಡೇಕಲ್ಲು ತೇಜಕುಮಾರ್, ಚಂದ್ರಶೇಖರ ಪೇರಾಲು, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಸೇರಿದಂತೆ ಅರೆಭಾಷೆ ಕಲಾವಿದರು, ಬರಹಗಾರರು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಪುಳಕಂಡ ಸಂದೀಪ್ ಸ್ವಾಗತಿಸಿದರು, ವಿನೋದ್ ಮೂಡಗದ್ದೆ ನಿರೂಪಿಸಿದರು, ನಿಡ್ಯಮಲೆ ಡಾ.ಜ್ಞಾನೇಶ್ ವಂದಿಸಿದರು.